ನವದೆಹಲಿ: 'ಉದ್ಯೋಗಕ್ಕಾಗಿ ಹಣ' ಹಗರಣಕ್ಕೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಡಿಎಂಕೆ ನಾಯಕ ವಿ. ಸೆಂಥಿಲ್ ಬಾಲಾಜಿ ಅವರಿಗೆ ಜಾಮೀನು ಮಂಜೂರಾದ ಕೆಲವೇ ದಿನಗಳಲ್ಲಿ ಅವರನ್ನು ತಮಿಳುನಾಡಿನ ಸಚಿವರನ್ನಾಗಿ ನೇಮಿಸಿದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಈ ಪ್ರಕರಣದ ಸಾಕ್ಷಿಗಳು ಎಷ್ಟರಮಟ್ಟಿಗೆ ಸ್ವತಂತ್ರರಿರುತ್ತಾರೆ ಎಂಬ ಆತಂಕವನ್ನು ವ್ಯಕ್ತಪಡಿಸಿರುವ ಅರ್ಜಿಯ ಪರಿಶೀಲನೆಗೆ ಒಪ್ಪಿದೆ.
ಆದರೆ, ಬಾಲಾಜಿ ಅವರಿಗೆ ಜಾಮೀನು ಮಂಜೂರು ಮಾಡಿ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 26ರಂದು ನೀಡಿದ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರು ಇರುವ ವಿಭಾಗೀಯ ಪೀಠವು ನಿರಾಕರಿಸಿದೆ.
'ನಾವು ನಿಮಗೆ ಜಾಮೀನು ನೀಡಿದೆವು. ಅದಾದ ಕೆಲವೇ ದಿನಗಳಲ್ಲಿ ನೀವು ಸಚಿವರಾದಿರಿ. ಇದು ನಿಲ್ಲಬೇಕು. ಈಗ ನೀವು ಸಂಪುಟದ ಹಿರಿಯ ಸಚಿವರಾಗಿರುವ ಕಾರಣ ಸಾಕ್ಷಿಗಳು ಒತ್ತಡಕ್ಕೆ ಸಿಲುಕುತ್ತಾರೆ ಎಂಬ ಭಾವನೆ ಯಾರಲ್ಲಾದರೂ ಮೂಡುತ್ತದೆ. ಇಲ್ಲಿ ಏನು ನಡೆಯುತ್ತಿದೆ' ಎಂದು ಬಾಲಾಜಿ ಪರವಾಗಿ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ಉದ್ದೇಶಿಸಿ ಪೀಠವು ಪ್ರಶ್ನಿಸಿತು.
ಈ ವಿಚಾರವಾಗಿ ನ್ಯಾಯಾಲಯವು ನೋಟಿಸ್ ಜಾರಿ ಮಾಡುವುದಿಲ್ಲ. ಪ್ರಕರಣದಲ್ಲಿ ಸಾಕ್ಷಿಗಳು 'ಒತ್ತಡದಲ್ಲಿ ಇರುತ್ತಾರೆಯೇ' ಎಂಬುದಕ್ಕೆ ವಿಚಾರಣೆಯನ್ನು ಸೀಮಿತಗೊಳಿಸಲಾಗುತ್ತದೆ ಎಂದು ಪೀಠವು ಸ್ಪಷ್ಟಪಡಿಸಿತು. ವಿಚಾರಣೆಯನ್ನು ಡಿಸೆಂಬರ್ 13ಕ್ಕೆ ನಿಗದಿ ಮಾಡಲಾಗಿದೆ.
ದೂರುದಾರರ ಪೈಕಿ ಒಬ್ಬರಾದ ಕೆ. ವಿದ್ಯಾ ಕುಮಾರ್ ಅವರು ಸಲ್ಲಿಸಿರುವ ಅರ್ಜಿಯು, ಜಾಮೀನು ಮಂಜೂರಾದ ತಕ್ಷಣ ಬಾಲಾಜಿ ಅವರು ಸಂಪುಟ ದರ್ಜೆಯ ಸಚಿವರಾಗಿ ನೇಮಕ ಆಗಿದ್ದಾರೆ ಎಂಬ ಆತಂಕವನ್ನು ಆಧರಿಸಿದೆ ಎಂದು ಪೀಠವು ಹೇಳಿದೆ.
ಬಾಲಾಜಿ ಅವರು ಸೆಪ್ಟೆಂಬರ್ 29ರಂದು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಎಂ.ಕೆ. ಸ್ಟಾಲಿನ್ ನೇತೃತ್ವದ ಸಂಪುಟದಲ್ಲಿ ಬಾಲಾಜಿ ಅವರಿಗೆ ಮೊದಲು ನೀಡಿದ್ದ ಖಾತೆಗಳನ್ನೇ ಮತ್ತೆ ನೀಡಲಾಗಿದೆ.