ನವದೆಹಲಿ: ಇಂಡಿಯಾ ಮೈತ್ರಿಕೂಟಕ್ಕೆ ಸೇರಿದ ಎಲ್ಲಾ ಪಕ್ಷಗಳು ಮಂಗಳವಾರ ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿವೆ.
'ಇಂಡಿಯಾ' ಮೈತ್ರಿಕೂಟಕ್ಕೆ ಸೇರಿದ 60 ಸಂಸದರು ನೋಟಿಸ್‌ಗೆ ಸಹಿ ಹಾಕಿದ್ದಾರೆ ಎಂದು 'ಪಿಟಿಐ' ವರದಿ ಮಾಡಿದೆ.
'ಇಂಡಿಯಾ' ಮೈತ್ರಿಕೂಟಕ್ಕೆ ಸೇರಿದ ಎಲ್ಲಾ ಪಕ್ಷಗಳಿಗೆ ಈ ಹಂತದಲ್ಲಿ ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ವಿರುದ್ಧ ಔಪಚಾರಿಕವಾಗಿ ಅವಿಶ್ವಾಸ ನಿರ್ಣಯವನ್ನು ಸಲ್ಲಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಧನಕರ್ ಅವರ ಕಾರ್ಯವೈಖರಿ ಅತ್ಯಂತ ಪಕ್ಷಪಾತದಿಂದ ಕೂಡಿದೆ. ಇದು ಇಂಡಿಯಾ ಮೈತ್ರಿಕೂಟದ ಪಕ್ಷಗಳಿಗೆ ಬಹಳ ನೋವಿನ ಸಂಗತಿಯಾಗಿದೆ, ಆದರೆ, ಸಂಸದೀಯ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಅವಿಶ್ವಾಸ ನಿರ್ಣಯ ಅನಿವಾರ್ಯವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಗದೀಪ್ ಧನಕರ್ ವಿರುದ್ಧದ ಅವಿಶ್ವಾಸ ನಿರ್ಣಯದ ಪ್ರಸ್ತಾವನೆಯನ್ನು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ ಎಂದು 'ಇಂಡಿಯಾ' ಬಣದ ನಾಯಕರು ತಿಳಿಸಿದ್ದಾರೆ.