ನವದೆಹಲಿ: ವಿವಾದಾತ್ಮಕ ವಕ್ಫ್ ಮಸೂದೆ ತಿದ್ದುಪಡಿಯನ್ನು ಕ್ರೈಸ್ತ ಸಮುದಾಯವು ವಿರೋಧಿಸುವಂತೆ ಹಾಗೂ ಮುಸ್ಲಿಂ ವಿರೋಧಿ ಭಾವನೆಗಳನ್ನು ಉತ್ತೇಜಿಸದಂತೆ ವಿರೋಧ ಪಕ್ಷಗಳಲ್ಲಿರುವ ಕ್ರೈಸ್ತ ಸಂಸದರು, ಕ್ಯಾಥೋಲಿಕ್ ಚರ್ಚ್ ನಾಯಕತ್ವವನ್ನು ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿ.3ರಂದು ದೆಹಲಿಯಲ್ಲಿ ನಡೆದ ಭಾರತೀಯ ಕ್ಯಾಥೋಲಿಕ್ ಬಿಷಪ್‌ಗಳ ಮಹಾಸಂಸ್ಥೆಯ (ಸಿಬಿಸಿಐ) ಸಭೆಯಲ್ಲಿ ಕ್ರೈಸ್ತ ಸಂಸದರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ 20 ಜನ ಕ್ರೈಸ್ತ ಸಮುದಾಯದ ಸಂಸದರು ಭಾಗವಹಿಸಿದ್ದರು. ಈ ಪೈಕಿ ವಿರೋಧ ಪಕ್ಷಗಳ ಸಂಸದರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ವಕ್ಫ್ ಮಸೂದೆಯಿಂದ ಸಂವಿಧಾನದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕ್ರೈಸ್ತ ಸಮುದಾಯವು ಈ ಕುರಿತು ಮುಸ್ಲಿಂ ಸಮುದಾಯದ ಪರ ನಿಲುವು ತಾಳಬೇಕು. ಸಮುದಾಯವು ಮುಸ್ಲಿಂ ವಿರೋಧಿ ನೀತಿಯ ಭಾಗವಾಗದಂತೆ ಚರ್ಚ್ ಖಚಿತಪಡಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಚರ್ಚಿಸಲಾಗಿದೆ ಎನ್ನಲಾಗಿದೆ.
ಟಿಎಂಸಿಯ ಸಂಸದೀಯ ಸಮಿತಿಯ ನಾಯಕ ಡೆರೆಕ್ ಒಬ್ರಯಾನ್, ಹೈಬಿ ಈಡೆನ್, ಡೀನ್ ಕುರ‍್ಯಾಕೋಸ್, ಆಂಟೊ ಆಂಟೊನಿ, ಸಿಪಿಐ(ಎಂ) ಸಂಸದ ಜಾನ್ ಬಿಟ್ಟಾಸ್ ಸಭೆಯಲಿದ್ದರು.
ಸಿಬಿಸಿಐ ಅಧ್ಯಕ್ಷ ಆರ್ಚ್‌ಬಿಷಪ್ ಆಂಡ್ರ್ಯೂಸ್ ಥಾಜತ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಜಾರ್ಜ್ ಕುರಿಯನ್ ಅವರು ಸಭೆಗೆ ಬರುವ ವೇಳೆಗಾಗಲೇ ವಕ್ಫ್ ಕುರಿತು ಚರ್ಚೆ ನಡೆದಿತ್ತು ಎಂದು ತಿಳಿದು ಬಂದಿದೆ. ಬಿಜೆಪಿಯ ಇಬ್ಬರು ಕ್ರೈಸ್ತ ಸಂಸದರು ಸಭೆಗೆ ಗೈರಾಗಿದ್ದರು ಎನ್ನಲಾಗಿದೆ.
ಕ್ರೈಸ್ತ ಸಮುದಾಯ ಮತ್ತು ಅದರ ಹಕ್ಕುಗಳನ್ನು ರಕ್ಷಿಸುವಲ್ಲಿ ಕ್ರೈಸ್ತ ಸಂಸದರ ಪಾತ್ರ, ಅಲ್ಪಸಂಖ್ಯಾತರು, ವಿಶೇಷವಾಗಿ ಕ್ರಿಶ್ಚಿಯನ್ನರ ವಿರುದ್ಧ ಹೆಚ್ಚುತ್ತಿರುವ ದಾಳಿ, ಬೆದರಿಕೆ ಹಾಗೂ ಕ್ರೈಸ್ತ ಸಂಸ್ಥೆಗಳನ್ನು ಗುರಿಯಾಗಿಸಲು ಎಫ್‌ಸಿಆರ್‌ಎ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ವಿಷಯದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಅಲ್ಲದೆ, ಲೋಕಸಭೆಯಲ್ಲಿ ಆಂಗ್ಲೊ- ಇಂಡಿಯನ್ನರಿಗೆ ಮೀಸಲಿದ್ದ ಎರಡು ಸ್ಥಾನಗಳು ಮತ್ತು 10 ರಾಜ್ಯಗಳ ವಿಧಾನಸಭೆಗಳಲ್ಲಿನ ಮೀಸಲು ಸ್ಥಾನಗಳನ್ನು ರದ್ದುಪಡಿಸಿದ್ದ ವಿಷಯವೂ ಸಭೆಯಲ್ಲಿ ಚರ್ಚೆಯಾಯಿತು.