ನವದೆಹಲಿ: ಬಿಜೆಪಿ ಸೋಮವಾರ ತನ್ನ ಮಹಾರಾಷ್ಟ್ರ ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಕೇಂದ್ರ ವೀಕ್ಷಕರನ್ನಾಗಿ ನೇಮಕ ಮಾಡಿದೆ.ಡಿಸೆಂಬರ್ 4 ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆ ಇದ್ದು, ಅಂದು ಶಾಸಕರು ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ ಮತ್ತು ಅವರೇ ಮಹಾರಾಷ್ಟ್ರ ಮುಂದಿನ ಮುಖ್ಯಮಂತ್ರಿಯಾಗಬಹುದು.
ಹೊಸ ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಡಿಸೆಂಬರ್ 5 ರಂದು ಸಂಜೆ ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ನಡೆಯಲಿದೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ ಅವರು ಹೇಳಿದ್ದಾರೆ.
ಸಮಾರಂಭಕ್ಕೂ ಮುನ್ನ ಬಿಜೆಪಿ ಶಾಸಕರು ಸಭೆ ಸೇರಿ ತಮ್ಮ ನಾಯಕನನ್ನು ಆಯ್ಕೆ ಮಾಡಲಿದ್ದಾರೆ.
ಬಿಜೆಪಿ ಮಹಾರಾಷ್ಟ್ರ ಮುಖ್ಯಮಂತ್ರಿಯ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡದಿದ್ದರೂ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ಮತ್ತೊಮ್ಮ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿದೆ.
ಪಕ್ಷದ ಎರಡು ಪ್ರಮುಖ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಹೊಸ ಸರ್ಕಾರದಲ್ಲಿ ತಲಾ ಒಂದು ಉಪ ಮುಖ್ಯಮಂತ್ರಿ ಸ್ಥಾನಗಳನ್ನು ನೀಡುವ ಸಾಧ್ಯತೆ ಇದೆ.