ಸೋಲ್: ದೇಶದಲ್ಲಿ ಮಿಲಿಟರಿ ಆಡಳಿತ ಹೇರಿಕೆ ಮಾಡಲು ಯತ್ನಿಸಿದ್ದಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಯೂನ್ ಸುಕ್ ಯೋಲ್, ಆಂತರಿಕ ಇಲಾಖೆ ಸಚಿವ ಮತ್ತು ರಕ್ಷಣಾ ಇಲಾಖೆಯ ಮಾಜಿ ಸಚಿವರ ವಿರುದ್ಧ ದಕ್ಷಿಣ ಕೊರಿಯಾ ಪ್ರಾಸಿಕ್ಯೂಟರ್‌ಗಳು ತನಿಖೆ ಆರಂಭಿಸಿದ್ದಾರೆ ಎಂದು 'Yonhap' ಸುದ್ದಿಸಂಸ್ಥೆ ಗುರುವಾರ ವರದಿ ಮಾಡಿದೆ.
'ದೇಶದ ವಿರೋಧ ಪಕ್ಷಗಳು ಸಂಸತ್ ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿವೆ' ಎಂದು ಆರೋಪಿಸಿದ್ದ ಸುಕ್ ಯೋಲ್ ಅವರು, 'ತುರ್ತು ಸೇನಾ ಆಡಳಿತ' ಜಾರಿಗೆ ಮಂಗಳವಾರ ಆದೇಶಿಸಿದ್ದರು.
'ದೇಶ ವಿರೋಧಿ ಕೃತ್ಯದ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಉತ್ತರ ಕೊರಿಯಾ ಯತ್ನಿಸುತ್ತಿದೆ' ಎಂದೂ ದೂರಿದ್ದರು.
ಮರುದಿನ, ಮಿಲಿಟರಿ ಆಡಳಿತ ಜಾರಿ ಆದೇಶದ ವಿರುದ್ಧ ಸಂಸದರು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮತ ಚಲಾಯಿಸಿದ್ದರು. ಬಳಿಕ, ಸುಕ್ ಅವರು ಆದೇಶ ಹಿಂಪಡೆದಿದ್ದರು. ಅದರ ಬೆನ್ನಲ್ಲೇ, ಕಿಮ್ ಯಾಂಗ್ ಹ್ಯೂನ್ ಅವರು ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸದ್ಯ ತನಿಖೆ ಆರಂಭವಾಗಿದ್ದು, ತಮಗೆ ವಿದೇಶ ಪ್ರಯಾಣ ನಿರ್ಬಂಧಿಸಲಾಗಿದೆ ಎಂದು ಯಾಂಗ್ ಹೇಳಿದ್ದಾರೆ.