ಕೋಲ್ಕತ್ತ: ಬಂಧನದಲ್ಲಿರುವ ಹಿಂದೂ ಮುಖಂಡ ಚಿನ್ಮಯಿ ಕೃಷ್ಣದಾಸ್ ಅವರ ಪರವಾಗಿ ವಾದ ಮಂಡನೆಗೆ ಮುಂದಾಗುವ ವಕೀಲರ ರಕ್ಷಣೆಗೆ ಬಾಂಗ್ಲಾ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೋಲ್ಕತ್ತದ ಇಸ್ಕಾನ್ ಮನವಿ ಮಾಡಿದೆ.
ಕೋಲ್ಕತ್ತದ ಇಸ್ಕಾನ್ ವಕ್ತಾರ ರಾಧಾರಮಣ್ ದಾಸ್ ಅವರು, 'ಚಿನ್ಮಯಿ ಕೃಷ್ಣದಾಸ್ ಅವರ ಪರ ವಕೀಲ ರಮಣ್ ರಾಯ್ ಅವರ ಮೇಲೆ ಗುಂಪೊಂದು ಹಲ್ಲೆ ಮಾಡಿದೆ.
ಹೀಗಾಗಿ ವಾದ ಮಂಡನೆಗೆ ವಕೀಲರು ಮುಂದೆ ಬರುತ್ತಿಲ್ಲ. ಈ ಪ್ರಕರಣದಲ್ಲಿ ವಾದ ಮಂಡನೆಗೆ ಮುಂದಾಗುವ ವಕೀಲರಿಗೆ ಸರ್ಕಾರ ಭದ್ರತೆ ನೀಡಬೇಕು' ಎಂದು ಕೇಳಿದ್ದಾರೆ.
ನ್ಯಾಯಾಲಯದಲ್ಲಿ ಚಿನ್ಮಯಿ ಅವರನ್ನು ಸಮರ್ಥಿಸಿಕೊಂಡರು ಎಂಬ ಕಾರಣಕ್ಕಾಗಿ ಅವರ ಮೇಲೆ ಹಲ್ಲೆ ನಡೆದಿದ್ದು, ಸದ್ಯ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದಾರೆ.
'ಬಾಂಗ್ಲಾದೇಶ ಸಮ್ಮಿಲಿತ್ ಸನಾತನಿ ಜಾಗರಣ ಜೋತೆ' ವಕ್ತಾರರಾದ ಕೃಷ್ಣದಾಸ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ಕಳೆದ ಸೋಮವಾರ ಬಂಧಿಸಲಾಗಿದೆ.