ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಲು ಮುಂದಾಗಿರುವ ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆಯನ್ನು ಉಗ್ರವಾಗಿ ಖಂಡಿಸಿರುವ ವಿಪಕ್ಷಗಳು, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿವೆ.
ಈ ವಿಷಯ ಕುರಿತು ಲೋಕಸಭೆಯಲ್ಲಿ ಬುಧವಾರ ವ್ಯಾಪಕ ಕೋಲಾಹಲ ಉಂಟಾಯಿತು. ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ ಬ್ಯಾನರ್ಜಿ ಮಾತನಾಡಿ, ಈ ಮಸೂದೆಯು ಭಾರತೀಯ ಬ್ಯಾಂಕಿಂಗ್ ಕ್ಷೇತ್ರವನ್ನು ಖಾಸಗೀಕರಣದತ್ತ ಕೊಂಡೊಯ್ಯಲು ಸಿದ್ಧಪಡಿಸಿರುವ ಮಾರ್ಗ ಎಂದು ಹರಿಹಾಯ್ದರು.
'ಮೇಲ್ನೋಟಕ್ಕೆ ಇದು ಹೂಡಿಕೆದಾರರಿಗೆ ರಕ್ಷಣೆ ಹಾಗೂ ಬ್ಯಾಂಕ್ ಗ್ಯಾರಂಟಿ ಉತ್ತಮಪಡಿಸುವ ಉದ್ದೇಶವೆಂದೇ ಕಾಣಿಸುತ್ತಿದೆ. ಆದರೆ ವಾಸ್ತವದಲ್ಲಿ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಸರ್ಕಾರದ ಪಾಲನ್ನು ಶೇ 51ರಿಂದ ಶೇ 26ಕ್ಕೆ ಇಳಿಸುವ ಹುನ್ನಾರ ಅಡಗಿದೆ' ಎಂದು ಆರೋಪಿಸಿದ್ದಾರೆ.
'ಬ್ಯಾಂಕಿಂಗ್ ಕ್ಷೇತ್ರಕ್ಕೆ ಸದ್ಯ ಬೇಕಿರುವುದು ಸದೃಢ ಸೈಬರ್ ಭದ್ರತೆಯ ವ್ಯವಸ್ಥೆ. ಜತೆಗೆ ಗ್ರಾಹಕರ ಮಾಹಿತಿ ರಕ್ಷಣೆಗೆ ಕಠಿಣ ಮಾರ್ಗಸೂಚಿಗಳು. ಬ್ಯಾಂಕ್ ವಂಚನೆ ತಡೆಗಟ್ಟಲು ಕಠಿಣ ನಿಯಮಗಳನ್ನು ರಚಿಸಿದಲ್ಲಿ ಬ್ಯಾಂಕ್‌ಗಳ ಮೇಲೆ ಗ್ರಾಹಕರ ನಂಬಿಕೆ ಹೆಚ್ಚಾಗಲಿದೆ' ಎಂದಿದ್ದಾರೆ.
ಸಮಾಜವಾದಿ ಪಕ್ಷದ ಸಂಸದ ರಾಜೀವ್ ರಾಯ್ ಮಾತನಾಡಿ, ಸಾಮಾನ್ಯ ಜನರು ಸಾಲದ ವಿಷಯದಲ್ಲಿ ಅನುಭವಿಸುತ್ತಿರುವ ಸಂಕಷ್ಟಗಳನ್ನು ಲೋಕಸಭೆಯಲ್ಲಿ ವಿವರಿಸಿದರು.
'ಸಿಬಿಲ್ ಸ್ಕೋರ್ ಎಂಬುದು ಬಡ ಜನರ ಬೆನ್ನುಮೂಳೆ ಮುರಿದಿದೆ. ಮಧ್ಯಮ ವರ್ಗದ ಜನರೂ ಇಂಥದ್ದೇ ಸಮಸ್ಯೆ ಎದುರಿಸುತ್ತಿದ್ದಾರೆ. ಬ್ಯಾಂಕ್‌ಗಳು ಸಾಲ ಪಡೆದ ಗ್ರಾಹಕರೊಂದಿಗೆ ಸರಿಯಾಗಿ ಸಂವಹನ ನಡೆಸದ ಹಾಗೂ ಸರಿಯಾಗಿ ವ್ಯವಹರಿಸದ ಕಾರಣ ಅವರೆಲ್ಲರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಗುಪ್ತ ಶುಲ್ಕಗಳು, ಎಟಿಎಂನಿಂದ ಹಣ ಪಡೆಯುವ, ಹಣ ಪಾವತಿ ಕುರಿತು ಎಸ್‌ಎಂಎಸ್ ಸ್ವೀಕರಿಸುವ ಕನಿಷ್ಠ ಸೇವೆಗೂ ಶುಲ್ಕ ವಿಧಿಸುವ ಕ್ರಮವನ್ನು ಖಂಡಿಸಿದರು. ಜತೆಗೆ ಹಿರಿಯ ನಾಗರಿಕರನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿರುವ ಸೈಬರ್ ದಾಳಿ ಕುರಿತು ಡಿಎಂಕೆ ಪಕ್ಷದ ಸಂಸದೆ ರಾಣಿ ಶ್ರೀಕುಮಾರ್ ಅವರೂ ಕಳವಳ ವ್ಯಕ್ತಪಡಿಸಿದರು.
ಟಿಡಿಪಿ ಸಂಸದ ಡಿ. ಪ್ರಸಾದ್ ರಾವ್ ಅವರು, ಸಣ್ಣ ವ್ಯವಹಾರಗಳಿಗೆ ಸಾರ್ವಜನಿಕ ಬ್ಯಾಂಕ್‌ಗಳು ನೀಡುತ್ತಿರುವ ನೆರವನ್ನು ಪ್ರಶಂಸಿಸಿದರು. ಜತೆಗೆ ಆಂಧ್ರದಲ್ಲಿರುವ ಬಿಜೆಪಿ-ಟಿಡಿಪಿ ಮೈತ್ರಿಯ ಡಬಲ್ ಎಂಜಿನ್ ಸರ್ಕಾರದಿಂದ ಎಲ್ಲವೂ ಒಳಿತಾಗಿದ್ದು, ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲಾಗುತ್ತಿದೆ ಎಂದರು.
ಶಿವಸೇನಾ (ಯುಬಿಟಿ) ಸಂಸದ ಅನಿಲ್ ದೇಸಾಯಿ ಅವರು ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಿಂದ ವಿಮುಖರಾಗುತ್ತಿರುವ ಗ್ರಾಹಕರು ಇತರ ಹೂಡಿಕೆಗಳತ್ತ ಗಮನ ಹರಿಸುತ್ತಿರುವುದರ ಕುರಿತು ಗಮನ ಸೆಳೆದರು.
ಎನ್‌ಸಿಪಿ (ಎಸ್ಪಿ) ಸಂಸದೆ ಸುಪ್ರಿಯಾ ಸುಳೆ ಮಾತನಾಡಿ, ಹಣಕಾಸು ವಿಷಯದಲ್ಲಿನ ವಂಚನೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. 'ವಂಚಕರಿಗೆ ಜೈಲು ಶಿಕ್ಷೆ ವಿಧಿಸುವಂತ ಕಾನೂನು ಜಾರಿಯಾಗಬೇಕು. ಜತೆಗೆ ಹಣ ಕಳೆದುಕೊಂಡವರಿಗೆ ಮರಳಿ ಅದು ಸಿಗವಂತೆ ವ್ಯವಸ್ಥೆ ಮಾಡಬೇಕು' ಎಂದು ಆಗ್ರಹಿಸಿದರು.
ಕಾರ್ತಿ ಚಿದಂಬರಂ ಅವರು ಮಾತನಾಡಿ, 'ಸರ್ಕಾರವು 100 ದಿನಗಳ ಕಾರ್ಯಸೂಚಿಯಲ್ಲಿ ಗಮನಾರ್ಹ ಬದಲಾವಣೆ ತರುವುದಾಗಿ ಭರವಸೆ ನೀಡಿತ್ತು. ಆದರೆ ಈ ಮಸೂದೆಯಲ್ಲಿ ಆ ಘನತೆಯೇ ಕಾಣೆಯಾಗಿದೆ' ಎಂದರು.