ಲಖನೌ: ಉತ್ತರ ಪ್ರದೇಶದ ಹಿಂಸಾಚಾರ ಪೀಡಿತ ಸಂಭಲ್‌ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಅವರೊಂದಿಗೆ ಉತ್ತರ ಪ್ರದೇಶದ ಕಾಂಗ್ರೆಸ್‌ನ ಸಂಸದರೂ ಇರಲಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್, 'ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಸಂಭಲ್‌ಗೆ ಭೇಟಿ ನೀಡಲಿದ್ದಾರೆ.
ನ. 24ರಂದು ಈ ಪ್ರದೇಶದಲ್ಲಿ ನಾಲ್ವರು ಮೃತಪಟ್ಟಿದ್ದರು' ಎಂದಿದ್ದಾರೆ.
ಹರಿಹರ ದೇಗುಲದ ಮೇಲೆ ಮೊಗಲ್ ದೊರೆಗಳು ಮಸೀದಿ ನಿರ್ಮಿಸಿದ್ದಾರೆ ಎಂಬ ಅರ್ಜಿಗೆ ಸಂಬಂಧಿಸಿದಂತೆ ಸಮೀಕ್ಷೆಗೆ ಆದೇಶಿಸಿದ ನ್ಯಾಯಾಲಯದ ಆದೇಶ ವಿರೋಧಿಸಿ ನ. 19ರಂದು ಸಂಭಾಲ್‌ನಲ್ಲಿ ಪ್ರತಿಭಟನೆ ನಡೆಯಿತು. ನ. 24ರಂದು ಎರಡನೇ ಸಮೀಕ್ಷೆ ನಡೆಸಲು ಮುಂದಾದ ಸಂದರ್ಭದಲ್ಲಿ ಪ್ರತಿಭಟನೆ ಹಿಂಸಾಚಾರ ಸ್ವರೂಪ ಪಡೆದುಕೊಂಡಿತು. ಶಾಹಿ ಜಮಾ ಮಸೀದಿ ಎದುರು ಜಮಾಯಿಸಿದ ಪ್ರತಿಭಟನಕಾರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ಸಂಭವಿಸಿತು. ಈ ಸಂದರ್ಭದಲ್ಲಿ ನಾಲ್ವರು ಮೃತಪಟ್ಟಿದ್ದರು.
ಸಂಭಾಲ್ ಹಿಂಸಾಚಾರ ಕುರಿತು ಚರ್ಚೆಗೆ ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಅವಕಾಶ ಕೋರಿವೆ.