ಚಂಡೀಗಢ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಪಂಜಾಬ್‌ನಲ್ಲಿ ರೈತರು ಸೋಮವಾರ ಬಂದ್ ನಡೆಸಿದರು.
ಪ್ರತಿಭಟನಕಾರರು ಹಲವೆಡೆ ರಸ್ತೆ ಮತ್ತು ರೈಲು ತಡೆ ನಡೆಸಿದ ಕಾರಣ ಪ್ರಯಾಣಿಕರು ಪರದಾಡಿದರು. ಹಲವು ಕಡೆಗಳಲ್ಲಿ ವಾಣಿಜ್ಯ ಕಟ್ಟಡಗಳ ಬಾಗಿಲು ಮುಚ್ಚಲಾಗಿತ್ತು.
ಪಟಿಯಾಲಾ, ಜಲಂಧರ್, ಅಮೃತಸರ, ಫಿರೋಜ್‌ಪುರ, ಪಠಾಣ್‌ಕೋಟ್ ಸೇರಿದಂತೆ ಹಲವು ಕಡೆಗಳ ರಸ್ತೆ ಮತ್ತು ಹೆದ್ದಾರಿಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 4 ಗಂಟೆವರೆಗೆ ರೈತರು ಧರಣಿ ನಡೆಸಿದರು. ಧಾರೇರಿ ಜಟ್ಟನ್ ಟೋಲ್ ಪ್ಲಾಜಾ ಬಳಿಯಲ್ಲಿ ರೈತರು ಧರಣಿ ಕುಳಿತ ಕಾರಣ ಪಟಿಯಾಲಾ-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಓಡಾಟಕ್ಕೆ ಅಡಚಣೆ ಉಂಟಾಗಿತ್ತು.
ಕೆಲವು ಕಡೆಗಳಲ್ಲಿ ಪ್ರಯಾಣಿಕರು ಮತ್ತು ಪ್ರತಿಭಟನಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಕೆಲವು ಕಡೆಗಳಲ್ಲಿ ರೈತರು ಬಲವಂತವಾಗಿ ರೈಲುಗಳ ಸಂಚಾರವನ್ನು ರದ್ದುಪಡಿಸಿದರು. ಹೀಗಾಗಿ ಫಿರೋಜ್‌ಪುರ, ಜಲಂಧರ್, ಲೂಧಿಯಾನಾ ರೈಲು ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ಅತಂತ್ರರಾಗಿ ಪರದಾಡಿದರು.