ನವದೆಹಲಿ: ಒಂದು ದೇಶ, ಒಂದು ಚುನಾವಣೆ ಮಸೂದೆ ಕುರಿತ ಚರ್ಚೆಗೆ ಕೇಂದ್ರ ಸರ್ಕಾರ ರಚಿಸಲಿರುವ ಜಂಟಿ ಸಂಸದೀಯ ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿನಿಧಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಇವರೊಂದಿಗೆ ಮನೀಶ್ ತಿವಾರಿ, ಸುಖದೇವ್ ಭಗತ್ ಹಾಗೂ ರಣದೀಪ್ ಸುರ್ಜೇವಾಲಾ ಅವರ ಹೆಸರನ್ನು ಸಮಿತಿಗೆ ಶಿಫಾರಸು ಮಾಡಲಾಗಿದೆ.
ದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಗಿತ್ತು. ಚರ್ಚೆ ಇಲ್ಲದೆ ಮಸೂದೆ ಮಂಡಿಸಿದ್ದನ್ನು 'ಸರ್ವಾಧಿಕಾರಿ ಧೋರಣೆ' ಎಂದು ವಿರೋಧ ಪಕ್ಷಗಳು ತಮ್ಮ ಪ್ರತಿಭಟನೆ ದಾಖಲಿಸಿದ್ದವು.
ತೃಣಮೂಲ ಕಾಂಗ್ರೆಸ್‌ನಿಂದ ಕಲ್ಯಾಣ್ ಬ್ಯಾನರ್ಜಿ ಮತ್ತು ಸಾಕೇತ್ ಗೋಖಲೆ ಅವರ ಹೆಸರನ್ನು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕಳುಹಿಸಿದ್ದಾರೆ.
'ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆ ಆಯೋಜಿಸುವುದು ಸಂವಿಧಾನ ಹಾಗೂ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದದ್ದು' ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದರು
ಹೊಸ ಸಂಸತ್ ಭವನದಲ್ಲಿ ನಡೆದ ಲೋಕಸಭಾ ಕಲಾಪದಲ್ಲಿ ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರವನ್ನು ಬಳಸಲಾಗಿತ್ತು. ಜತೆಗೆ ಚೀಟಿಯನ್ನೂ ಎಣಿಸಲಾಗಿತ್ತು. ಇದರಲ್ಲಿ 269 ಸಂಸದರು ಮಸೂದೆ ಪರವಾಗಿ ಹಾಗೂ 198 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದ್ದರು.