ಕೋಲ್ಕತ್ತ: ಇಸ್ಕಾನ್ ಭಕ್ತರು ಮತ್ತು ಬೆಂಬಲಿಗರ ನರಮೇಧಕ್ಕೆ ಬಾಂಗ್ಲಾದೇಶದ ಮೂಲಭೂತವಾದಿ ಗುಂಪುಗಳು ಬಹಿರಂಗವಾಗಿ ಕರೆ ನೀಡುತ್ತಿವೆ ಎಂದು ಕೋಲ್ಕತ್ತದ ಇಸ್ಕಾನ್‌ನ ವಕ್ತಾರ ರಾಧಾರಮಣ್ ದಾಸ್ ಭಾನುವಾರ ಆರೋಪಿಸಿದ್ದಾರೆ.
'ಬಾಂಗ್ಲಾದೇಶದ ಮೂಲಭೂತವಾದಿಗಳು ಖಾಸಗಿ ಜೆಟ್‌ಗಳಲ್ಲಿ ಸಂಚರಿಸುತ್ತಾ, ಇಸ್ಕಾನ್ ಭಕ್ತರು ಮತ್ತು ಬೆಂಬಲಿಗ ಹತ್ಯೆ ಮಾಡುವಂತೆ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದಾರೆ.
ಆದರೆ, ಇಲ್ಲಿನ ಸರ್ಕಾರ ಮಾತ್ರ ಯಾವುದೇ ಕ್ರಮ ಜರುಗಿಸುತ್ತಿಲ್ಲ' ಎಂದು 'ಎಕ್ಸ್'ನಲ್ಲಿ ಹೇಳಿದ್ದಾರೆ.
ಬಾಂಗ್ಲಾದೇಶದ ಮೂಲಭೂತವಾದಿಯೊಬ್ಬರು, 'ಇಸ್ಕಾನ್ ಒಂದು ಕ್ಯಾನ್ಸರ್. ದೇಶದಲ್ಲಿರುವ ಎಲ್ಲಾ ಇಸ್ಕಾನ್ ದೇಗುಲಗಳನ್ನು ಬುಡಮೇಲು ಮಾಡಿ' ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇಂತಹ ಭಾಷಣಗಳು ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರಕ್ಕೆ ಕಾರಣವಾಗುತ್ತವೆ. ಇಂಥವರನ್ನು ಕೂಡಲೇ ಬಂಧಿಸಬೇಕು. ಜಗತ್ತು ಎಚ್ಚರಗೊಳ್ಳಲಿ ಎಂದು ದಾಸ್ ಆಗ್ರಹಿಸಿದ್ದಾರೆ.
Cut-off box - ಕೋಲ್ಕತ್ತ: ಬಾಂಗ್ಲಾ ಸೀರೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಕೋಲ್ಕತ್ತ (ಪಿಟಿಐ): ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಕೋಲ್ಕತ್ತದಲ್ಲಿ ಭಾನುವಾರ ನಡೆದ ಪ್ರತಿಭಟನೆಯಲ್ಲಿ ಬಾಂಗ್ಲಾದ 'ಢಾಕಾಯ್ ಜಾಮದಾನಿ ಸೀರೆ'ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು. ಬಂಗಾಳ ಹಿಂದೂ ಸುರಕ್ಷಾ ಸಮಿತಿಯು ಸಾಲ್ಟ್ ಲೇಕ್ ಅಂತರರಾಷ್ಟ್ರೀಯ ಬಸ್ ಟರ್ಮಿನಸ್ ಬಳಿ ಪ್ರತಿಭಟನೆಯನ್ನು ಆಯೋಜಿಸಿತ್ತು. ಬಾಂಗ್ಲಾದೇಶಿ ಸರಕುಗಳನ್ನು ಬಹಿಷ್ಕರಿಸಲು ಪ್ರತಿಭಟನಕಾರರು ಕರೆ ನೀಡಿದರು. ತ್ರಿವರ್ಣ ಧ್ವಜವನ್ನು ಅಗೌರವಿಸಿದರೆ ಮತ್ತು ಹಿಂದೂಗಳ ಮೇಲೆ ದಾಳಿ ಮುಂದುವರಿದರೆ ಭಾರತೀಯರು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.