ಯಾವುದೇ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆದಾಗ ಕನಿಷ್ಠ ಸರಾಸರಿ ಮೊತ್ತ (ಎಂಎಬಿ) ಕಾಯ್ದುಕೊಳ್ಳುವುದು ಕಡ್ಡಾಯ. ಆದರೆ, ಅನೇಕರಿಗೆ ಈ ಸರಾಸರಿ ಮೊತ್ತ ಎಂದರೇನು? ಬ್ಯಾಂಕ್‌ಗಳು ಅದನ್ನು ಹೇಗೆ ಲೆಕ್ಕ ಹಾಕುತ್ತವೆ? ಈ ನಿಯಮ ಪಾಲಿಸದಿದ್ದರೆ ಯಾವ ಸಂದರ್ಭದಲ್ಲಿ ಎಷ್ಟು ದಂಡ ಕಟ್ಟಬೇಕಾಗುತ್ತದೆ?ಎನ್ನುವ ಬಗ್ಗೆ ಸರಿಯಾದ ತಿಳಿವಳಿಕೆ ಇರುವುದಿಲ್ಲ. ಬನ್ನಿ, ಈ ಲೇಖನದಲ್ಲಿ ಇದರ ಪರಿಪೂರ್ಣ ಮಾಹಿತಿ ತಿಳಿಯೋಣ.
ಏನಿದು ಕನಿಷ್ಠ ಸರಾಸರಿ ಮೊತ್ತ?
ಒಂದು ತಿಂಗಳ ಅವಧಿಯಲ್ಲಿ ಬ್ಯಾಂಕ್‌ನ ಖಾತೆಯಲ್ಲಿ ಕಾಯ್ದುಕೊಳ್ಳಬೇಕಿರುವ ಸರಾಸರಿ ಮೊತ್ತವೇ ಮಂತ್ಲಿ ಆವರೇಜ್ ಬ್ಯಾಲೆನ್ಸ್. ಇದನ್ನು ಮಿನಿಮಂ ಆವರೇಜ್ ಬ್ಯಾಲೆನ್ಸ್ ಎಂದು ಕರೆಯಲಾಗುತ್ತದೆ.
ಯಾವ ಬ್ಯಾಂಕ್, ಯಾವ ಮಾದರಿಯ ಬ್ಯಾಂಕ್ ಖಾತೆ ಮತ್ತು ಯಾವ ಪ್ರದೇಶದಲ್ಲಿ ಬ್ಯಾಂಕ್ ಖಾತೆ ಇದೆ ಎನ್ನುವುದರ ಆಧಾರದ ಮೇಲೆ ಈ ಸರಾಸರಿ ಮೊತ್ತದಲ್ಲಿ ಬದಲಾವಣೆ ಇರುತ್ತದೆ. ಉದಾಹರಣೆಗೆ ಮಹಾನಗರಗಳಲ್ಲಿ (ಮೆಟ್ರೊ ಸಿಟಿ) ಎಕ್ಸಿಸ್ ಬ್ಯಾಂಕ್ ಉಳಿತಾಯ ಖಾತೆ ತೆರೆದರೆ ₹12 ಸಾವಿರ ಸರಾಸರಿ ಮೊತ್ತ ಕಾಯ್ದುಕೊಳ್ಳಬೇಕಾಗುತ್ತದೆ. ನಗರ ಪ್ರದೇಶದಲ್ಲಿ ಈ ಖಾತೆ ಆರಂಭಿಸಿದರೆ ಮಾಸಿಕ ₹5 ಸಾವಿರ ಕಾಯ್ದುಕೊಳ್ಳಬೇಕಾಗುತ್ತದೆ. ಇದೇ ಖಾತೆಯನ್ನು ಗ್ರಾಮೀಣ ಪ್ರದೇಶದಲ್ಲಿ ತೆರೆದರೆ ₹2,500 ಬ್ಯಾಲೆನ್ಸ್ ನಿರ್ವಹಿಸಬೇಕಾಗುತ್ತದೆ.
ಆದರೆ, ಕೆನರಾ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಆರಂಭಿಸಿದರೆ ಮಹಾನಗರ ಪ್ರದೇಶದಲ್ಲಿ ₹2 ಸಾವಿರ, ನಗರ ಪ್ರದೇಶದಲ್ಲಿ ₹1 ಸಾವಿರ ಮತ್ತು ಗ್ರಾಮೀಣ ಪ್ರದೇಶದಲ್ಲಿ ₹500 ಕಾಯ್ದುಕೊಂಡರೆ ಸಾಕಾಗುತ್ತದೆ. ಇದನ್ನು ಸರಿಯಾಗಿ ನಿರ್ವಹಿಸದಿದ್ದರೆ ವಿವಿಧ ಬ್ಯಾಂಕ್‌ಗಳು ಮಾಸಿಕ ₹300ರಿಂದ ₹600ರ ವರೆಗೂ ದಂಡ ವಿಧಿಸುತ್ತವೆ.
ಜನರ ತಪ್ಪು ಕಲ್ಪನೆ ಏನು?: ಕನಿಷ್ಠ ಸರಾಸರಿ ಮೊತ್ತದ ಬಗ್ಗೆ ಬಹುಪಾಲು ಗ್ರಾಹಕರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಬ್ಯಾಂಕ್ ನಿಗದಿ ಮಾಡಿರುವ ಮೊತ್ತವನ್ನು ಒಂದು ದಿನ ತಪ್ಪಿಸಿದರೂ ದಂಡ ಬೀಳುತ್ತದೆ ಎಂದುಕೊಂಡಿದ್ದಾರೆ. ಉದಾಹರಣೆಗೆ ಬ್ಯಾಂಕ್‌ವೊಂದು ₹12 ಸಾವಿರ ಕನಿಷ್ಠ ಸರಾಸರಿ ಮೊತ್ತ ಕಾಯ್ದುಕೊಳ್ಳಬೇಕು ಎಂದು ಹೇಳಿರುತ್ತದೆ ಎಂದುಕೊಳ್ಳಿ. ಪರಿಸ್ಥಿತಿ ಹೀಗಿದ್ದಾಗ, ಒಂದೇ ಒಂದು ದಿನ ಬ್ಯಾಂಕ್ ಖಾತೆಯಲ್ಲಿ ₹12 ಸಾವಿರ ನಿರ್ವಹಿಸದಿದ್ದರೆ ಬ್ಯಾಂಕ್ ದಂಡ ವಿಧಿಸುತ್ತದೆ ಎಂದು ಹೆಚ್ಚಿನ ಸಂಖ್ಯೆಯ ಗ್ರಾಹಕರು ಭಾವಿಸಿದ್ದಾರೆ.
ಆದರೆ, ವಾಸ್ತವದಲ್ಲಿ ಬ್ಯಾಂಕ್‌ನ ಕನಿಷ್ಠ ಸರಾಸರಿ ಮೊತ್ತ ಕುರಿತ ಲೆಕ್ಕಾಚಾರ ಹೀಗಿರುವುದಿಲ್ಲ. ಖಾತೆಯಲ್ಲಿರುವ ತಿಂಗಳ ಸರಾಸರಿ ಮೊತ್ತವನ್ನು ಬ್ಯಾಂಕ್ ಗಣನೆಗೆ ತೆಗೆದುಕೊಳ್ಳುತ್ತದೆ.
ಲೆಕ್ಕಾಚಾರ ಹೇಗೆ?: ಪ್ರತಿ ದಿನದ ಕೊನೆಯಲ್ಲಿ ಬ್ಯಾಂಕ್ ಖಾತೆಯಲ್ಲಿರುವ ಒಟ್ಟು ಹಣವನ್ನು ಗಣನೆಗೆ ತೆಗೆದುಕೊಂಡು ತಿಂಗಳಲ್ಲಿರುವ ದಿನಗಳೊಂದಿಗೆ ಭಾಗಿಸಿ ನೋಡಿದಾಗ ನಿರ್ದಿಷ್ಟ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಸರಾಸರಿ ಮೊತ್ತವನ್ನು ಎಷ್ಟು ಕಾಯ್ದುಕೊಳ್ಳಲಾಗಿದೆ ಎನ್ನುವುದು ತಿಳಿಯುತ್ತದೆ. ಈ ಸೂತ್ರ ಬಳಸಿ ಕನಿಷ್ಠ ಸರಾಸರಿ ಮೊತ್ತವನ್ನು ಕಂಡುಕೊಳ್ಳಬಹುದು (ಪ್ರತಿ ದಿನದ ಕೊನೆಯಲ್ಲಿ ಖಾತೆಯಲ್ಲಿರುವ ಒಟ್ಟು ಹಣ /ತಿಂಗಳಲ್ಲಿರುವ ದಿನಗಳು= ಮಾಸಿಕ ಸರಾಸರಿ ಮೊತ್ತ).
ಯಾವಾಗ ದಂಡ ಬೀಳುತ್ತದೆ?
ಉದಾಹರಣೆಗೆ ನಿಮ್ಮ ಬ್ಯಾಂಕ್‌ನಲ್ಲಿ ₹5 ಸಾವಿರ ಕನಿಷ್ಠ ಸರಾಸರಿ ಮೊತ್ತ ಕಾಯ್ದುಕೊಳ್ಳಬೇಕು ಎಂಬ ನಿಯಮ ಇರುತ್ತದೆ ಎಂದುಕೊಳ್ಳಿ. ಆದರೆ, ನಿಮ್ಮ ಖಾತೆಯಲ್ಲಿ ತಿಂಗಳ ಮೊದಲ 10 ದಿನಗಳ ವರೆಗೆ (ಡಿಸೆಂಬರ್ 1 ರಿಂದ ಡಿಸೆಂಬರ್ 10ರ ವರೆಗೆ) ₹10 ಸಾವಿರ ಇರುತ್ತದೆ. ಆ ನಂತರದ 21 ದಿನಗಳಲ್ಲಿ (ಡಿಸೆಂಬರ್ 11 ರಿಂದ ಡಿಸೆಂಬರ್ 31ರ ವರೆಗೆ) ಯಾವುದೇ ಹಣವಿರುವುದಿಲ್ಲ ಎಂದುಕೊಳ್ಳಿ. ಹೀಗಿದ್ದಾಗ ₹5 ಸಾವಿರ ಕನಿಷ್ಠ ಸರಾಸರಿ ಮೊತ್ತ ಕಾಯ್ದುಕೊಳ್ಳುವ ಜಾಗದಲ್ಲಿ ನೀವು ₹3,225 ಕನಿಷ್ಠ ಸರಾಸರಿ ಮೊತ್ತವನ್ನು ಮಾತ್ರ ನಿರ್ವಹಿಸಿದಂತಾಗುತ್ತದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ದಂಡ ವಿಧಿಸುತ್ತದೆ.
ಯಾವಾಗ ದಂಡ ಬೀಳಲ್ಲ?
ಉದಾಹರಣೆಗೆ ನಿಮ್ಮ ಬ್ಯಾಂಕ್‌ನಲ್ಲಿ ₹5 ಸಾವಿರ ಕಾಯ್ದುಕೊಳ್ಳಬೇಕು ಎಂಬ ನಿಯಮ ಇರುತ್ತದೆ ಎಂದುಕೊಳ್ಳಿ. ಆದರೆ, ನಿಮ್ಮ ಖಾತೆಯಲ್ಲಿ ತಿಂಗಳ ಮೊದಲ 10 ದಿನಗಳ ವರೆಗೆ (ಡಿಸೆಂಬರ್ 1 ರಿಂದ ಡಿಸೆಂಬರ್ 10ರ ವರೆಗೆ) ಯಾವುದೇ ಬ್ಯಾಲೆನ್ಸ್ ಇರುವುದಿಲ್ಲ ಎಂದು ಭಾವಿಸಿ. ಆದರೆ, ನಂತರದ 21 ದಿನಗಳಲ್ಲಿ (ಡಿಸೆಂಬರ್ 11 ರಿಂದ ಡಿಸೆಂಬರ್ 31 ರ ವರೆಗೆ) ₹15 ಸಾವಿರ ಇರುತ್ತದೆ ಎಂದುಕೊಳ್ಳಿ. ಹೀಗಿದ್ದಾಗ ₹5 ಸಾವಿರ ಕಾಯ್ದುಕೊಳ್ಳಬೇಕಿರುವ ಜಾಗದಲ್ಲಿ ನೀವು ₹10,161 ಬ್ಯಾಲೆನ್ಸ್ ನಿರ್ವಹಿಸಿದಂತಾಗುತ್ತದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ದಂಡ ವಿಧಿಸುವುದಿಲ್ಲ.
ಕಿವಿಮಾತು: ಖಾತೆಯಲ್ಲಿ ಕನಿಷ್ಠ ಸರಾಸರಿ ಮೊತ್ತ ಕಾಯ್ದುಕೊಳ್ಳದಿದ್ದರೆ ಬ್ಯಾಂಕ್‌ಗಳು ದಂಡ ವಿಧಿಸುವ ಜೊತೆಗೆ ಕೆಲ ಬ್ಯಾಂಕಿಂಗ್ ಸೇವೆಗಳ ಮೇಲೆ ಗ್ರಾಹಕರಿಗೆ ನಿರ್ಬಂಧ ಹೇರಬಹುದು.
ಚೆಕ್ ಪುಸ್ತಕ, ಡೆಬಿಟ್ ಕಾರ್ಡ್, ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳನ್ನು ನೀಡದೆ ಹೋಗಬಹುದು. ಕೆಲ ಗಂಭೀರ ಸಂದರ್ಭಗಳಲ್ಲಿ ಬ್ಯಾಂಕ್ ಖಾತೆಯನ್ನೇ ರದ್ದುಪಡಿಸಬಹುದು. ಹಾಗಾಗಿ, ಖಾತೆಯಲ್ಲಿ ಬ್ಯಾಂಕ್ ನಿಗದಿಪಡಿಸಿರುವ ಕನಿಷ್ಠ ಸರಾಸರಿ ಮೊತ್ತವನ್ನು ಕಾಯ್ದುಕೊಳ್ಳಿ. ಒಂದು ಅಥವಾ ಹೆಚ್ಚೆಂದರೆ ಎರಡು ಬ್ಯಾಂಕ್ ಖಾತೆಗಳನ್ನು ಇಟ್ಟುಕೊಂಡಾಗ ಕನಿಷ್ಠ ಸರಾಸರಿ ಮೊತ್ತ ಕಾಯ್ದುಕೊಳ್ಳುವುದು ಸುಲಭ.