ಮದನಪಲ್ಲಿ: ಆಂಧ್ರ ಪ್ರದೇಶದಲ್ಲಿ ಕ್ಷುಲ್ಲಕ ವಿಚಾರಕ್ಕೆ ದುಷ್ಕರ್ಮಿಯೋರ್ವ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಮೇಲೆ ಹಲ್ಲೆ ಮಾಡಿದ್ದು, ಮಾತ್ರವಲ್ಲದೇ ಪವಿತ್ರ ಮಾಲೆಯನ್ನು ಕಿತ್ತು ಹಾಕಿದ್ದ. ಈ ವಿಚಾರ ಹಿಂದೂ ಪರ ಸಂಘಟನೆಗಳ ವ್ಯಾಪಕ ಆಕ್ರೋಶ ತುತ್ತಾಗುತ್ತಿದ್ದಂತೆಯೇ ಆತ ಸಂತ್ರಸ್ಥ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದಾನೆ.
ಆಂಧ್ರ ಪ್ರದೇಶದ ಮದನಪಲ್ಲಿ ಬಸ್ ನಿಲ್ದಾಣದಲ್ಲಿ ಡಿಸೆಂಬರ್ 25ರಂದು ಈ ಘಟನೆ ನಡೆದಿದ್ದು, ಸಂತ್ರಸ್ಥ ಮಾಲಾಧಾರಿಯನ್ನು ವೆಂಕಟೇಶ್ ಎಂದು ಗುರುತಿಸಲಾಗಿದ್ದು, ದಾಳಿ ಮಾಡಿದ ದುಷ್ಕರ್ಮಿಯನ್ನು ಕರ್ನಾಟಕದ ಬೀದರ್ ಮೂಲದ ಜಿಯಾವುಲ್ ಹಕ್ ಎಂದು ಪೊಲೀಸರು ಗುರುತಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಡಿಸೆಂಬರ್ 25ರಂದು ಮದನಪಲ್ಲಿ ಬಸ್ ನಿಲ್ದಾಣದ ಬಳಿ ಆರೋಪಿ ಜಿಯಾ ಉಲ್ ಹಕ್ ರಸ್ತೆಗೆ ಅಡ್ಡಲಾಗಿ ತನ್ನ ದ್ವಿಚಕ್ರವಾಹನವನ್ನು ನಿಲ್ಲಿಸಿದ್ದ. ಇದರಿಂದ ದಾರಿಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನ ಸವಾರರಿಗೆ ತೊಂದರೆಯಾಗಿತ್ತು. ಇದನ್ನು ಪ್ರಶ್ನಿಸಿದ್ದ ಅಯ್ಯಪ್ಪ ಸ್ವಾಮಿ ಮಾಲಾಧಾರಿ ವೆಂಕಟೇಶ್ ದ್ವಿಚಕ್ರವಾಹನವನ್ನು ಪಕಕ್ಕೆ ಸರಿಸುವಂತೆ ಕೇಳಿದ್ದಾರೆ.
ಈ ವೇಳೆ ಜಿಯಾವುಲ್ ಹಕ್ ನಿರ್ಲಕ್ಷ್ಯವಾಗಿ ಉತ್ತರಿಸಿದ್ದೂ ಅಲ್ಲದೇ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಎಂದೂ ಕೂಡ ನೋಡದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಸಂಘರ್ಷ ಏರ್ಪಟ್ಟಿದ್ದು, ಜಿಯಾ ಉಲ್ ಹಕ್ ಸಂತ್ರಸ್ಥ ವೆಂಕಟೇಶ್ ಮೇಲೆ ಹಲ್ಲೆ ಮಾಡಿ ಪವಿತ್ರ ಮಾಲೆಯನ್ನು ಕಿತ್ತು ಬಿಸಾಡಿದ್ದಾನೆ.
ಸ್ಥಳೀಯರು ಈ ಜಗಳವನ್ನು ಬಿಡಿಸಿದರಾದರೂ, ಅಯ್ಯಪ್ಪ ಸ್ವಾಮಿ ಮಾಲಾಧಾರಿ ಮೇಲೆ ಮಾಡಿದ ಹಲ್ಲೆ ವಿಚಾರ ಕಾಡ್ಗಿಚ್ಚಿನಂತೆ ಸುತ್ತಮುತ್ತಲ ಪ್ರದೇಶದಲ್ಲಿ ಹರಡಿ ಹಿಂದೂಪರ ಸಂಘಟನೆಗಳು ಮತ್ತು ಇತರೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದಾರೆ.
ಕಾಲಿಗೆ ಬಿದ್ದು ಕ್ಷಮೆಯಾಚಿಸಿದ ಆರೋಪಿ
ಕೂಡಲೇ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಬಿಹಾರ ಮೂಲದ ದುಷ್ಕರ್ಮಿ ಜಿಯಾ ಉಲ್ ಹಕ್ ನನ್ನು ಬಂಧಿಸಿದ್ದಾರೆ. ಅಲ್ಲದೆ ಪ್ರತಿಭಟನಾ ನಿರತ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಒತ್ತಾಯದ ಮೇರೆಗೆ ಸಾರ್ವಜನಿಕವಾಗಿ ಜಿಯಾವುಲ್ ಹಕ್ ನಿಂದ ಸಂತ್ರಸ್ಥ ಅಯ್ಯಪ್ಪ ಸ್ವಾಮಿ ಮಾಲಾಧಾರಿ ವೆಂಕಟೇಶ್ ಕಾಲಿಗೆ ಬಿದ್ದು ಕ್ಷಮೆಯಾಚಿಸುವಂತೆ ಮಾಡಿದ್ದಾರೆ. ಆ ಮೂಲಕ ಈ ಪ್ರದೇಶದಲ್ಲಿ ಯಾವುದೇ ರೀತಿಯ ಕೋಮು ಸಂಘರ್ಷ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಕಾನೂನು ಕೈಗೆತ್ತಿಕೊಂಡರೆ ನಿರ್ಧಾಕ್ಷೀಣ್ಯ ಕ್ರಮ: SP
ಇನ್ನು ಈ ಪ್ರಕರಣವನ್ನು ಪೊಲೀಸ್ ಇಲಾಖೆ ಲಘುವಾಗಿ ಪರಿಗಣಿಸಿಲ್ಲ ಎಂದು ಹೇಳಿದ ಮದನಪಲ್ಲಿ ಎಸ್ಪಿ ವಿದ್ಯಾಸಾಗರ್ ನಾಯ್ಡು, 'ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 'ಮದನಪಲ್ಲಿ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದ ಸಣ್ಣ ವಿವಾದವನ್ನು ಕೆಲವರು ಕೋಮುಸಂಘರ್ಷಕ್ಕೆ ತಳ್ಳಲು ಯತ್ನಿಸಿದ್ದಾರೆ. ಮದನಪಲ್ಲಿಯಲ್ಲಿ ಧಾರ್ಮಿಕ ದ್ವೇಷ ಹುಟ್ಟು ಹಾಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
ನೇರವಾಗಿ ಸಂತ್ರಸ್ಥ ವ್ಯಕ್ತಿಯೇ ಪ್ರಕರಣದಲ್ಲಿ ತಮಗೆ ನ್ಯಾಯ ಸಿಕ್ಕಿದೆ ಎಂದು ಹೇಳಿದ್ದರೂ ಠಾಣೆಗೆ ಬಂದು ಹೊಡೆದಾಟ ನಡೆಸಿ ಹೋಟೆಲ್ ಧ್ವಂಸಗೊಳಿಸಿದ್ದಾರೆ. ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಸಿಸಿಟಿವಿ ದೃಶ್ಯಾವಳಿ ಮತ್ತು ತಂತ್ರಜ್ಞಾನದ ಆಧಾರದ ಮೇಲೆ ಹೋರಾಟದಲ್ಲಿ ಭಾಗಿಯಾಗಿರುವವರನ್ನು ಗುರುತಿಸಲಾಗುತ್ತಿದೆ.
ಅಂತೆಯೇ ಎರಡೂ ಕಡೆಯವರು ಸಂಯಮದಿಂದ ವರ್ತಿಸಬೇಕು. ಆರೋಪಿ ಜಿಯಾವುಲ್ ಹಕ್ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿ ಹೊಡೆದಾಟ ನಡೆಸಿದ್ದರಿಂದ ಆತನ ವಿರುದ್ಧ ಎಲ್ಲಾ ರೀತಿಯ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ವಿದ್ಯಾಸಾಗರ್ ನಾಯ್ಡು ಹೇಳಿದ್ದಾರೆ.