ಸ್ಯಾನ್ ಫ್ರಾನ್ಸಿಸ್ಕೋ : ತಬಲಾ ಮಾಂತ್ರಿಕ ಜಾಕಿರ್ ಹುಸೇನ್ (73) ಅವರು ಹೃದಯ ಸಂಬಂಧಿ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಗ್ರ್ಯಾಮಿ ಪ್ರಶಸ್ತಿ ವಿಜೇತ ಜಾಕೀರ್ ಅವರು ಕಳೆದ ಎರಡು ವಾರಗಳಿಂದ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಜಾಕಿರ್ ಹುಸೇನ್ ನಿಧನಕ್ಕೆ ರಾಜಸ್ಥಾನ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
'ಪ್ರಸಿದ್ಧ ತಬಲಾ ವಾದಕ, ಉಸ್ತಾದ್ ಅಲ್ಲಾ ರಖಾ ಅವರ ಪುತ್ರ ಉಸ್ತಾದ್ ಜಾಕಿರ್ ಹುಸೇನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ಆಸ್ಪತ್ರೆಯಲ್ಲಿ ಗಂಭೀರ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಸಹೋದರ ಅಯೂಬ್ ತಿಳಿಸಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುವಂತೆ ಲಂಡನ್ ಮೂಲದ ಔಲಿಯಾ ಸಾಹಬ್ ನನ್ನೊಂದಿಗೆ ಫೋನ್ ಕರೆಯಲ್ಲಿ ವಿನಂತಿಸಿದ್ದಾರೆ' ಎಂದು ಪತ್ರಕರ್ತ ಪರ್ವೈಜ್ ಆಲಂ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಸಿದ್ಧ ಸಂಗೀತಗಾರರಲ್ಲಿ ಒಬ್ಬರಾದ ಹುಸೇನ್ ಅವರು 1988 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2023 ರಲ್ಲಿ ಪದ್ಮವಿಭೂಷಣ ಗೌರವಕ್ಕೆ ಭಾಜನರಾಗಿದ್ದಾರೆ.