ಮುಳ್ಳೇರಿಯ: ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಮೇಲಾಗುತ್ತಿರುವ ಮಲತಾಯಿ ಧೋರಣೆ ಖಂಡನೀಯ. ಇಲ್ಲಿಯ ಕನ್ನಡಿಗರಿಗೆ ನೀಡಲ್ಪಟ್ಟಿರುವ ವಿಶೇಷಾಧಿಕಾರಗಳು ಯಾವುದೇ ಸೌಜನ್ಯವಾಗಿರದೆ, ಅದು ಸಂವಿಧಾನ ಬದ್ದ ಹಕ್ಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಶ್ರೀಕಾಂತ್ ಆಕ್ರೋಶ ವ್ಯಕ್ತಪಡಿಸಿದರು.
ಅಂಗನವಾಡಿ ಮಟ್ಟದಲ್ಲಿ ಕನ್ನಡ ಶಿಕ್ಷಣವನ್ನು ನಾಮಾವಶೇಷಗೊಳಿಸುವ ಹುನ್ನಾರ ಮತ್ತು ಅನರ್ಹರನ್ನು ಶಿಕ್ಷಿಯರಾಗಿ ನೇಮಿಸಲು ರ್ಯಾಂಕ್ ಲಿಸ್ಟ್ ತಯಾರಿಸಿದ ದೇಲಂಪಾಡಿ ಗ್ರಾಮ ಪಂಚಾಯತಿ ಆಡಳಿತ ಸಮಿತಿ ವಿರುದ್ದ ಅಡೂರು ಕೋರಿಕಂಡ ಅಂಗನವಾಡಿಯ ಕನ್ನಡ ಸಂರಕ್ಷಣಾ ಹೋರಾಟ ಸಮಿತಿ ಶುಕ್ರವಾರ ಅಡೂರು ಪೇಟೆಯಿಂದ ಗ್ರಾ.ಪಂ.ಕಾರ್ಯಾಲಯಕ್ಕೆ ನಡೆಸಿದ ಪ್ರತಿಭಟನಾ ಮೆರವಣಿಗೆ ಬಳಿಕ ನಡೆದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಲಂಪಾಡಿ ಗ್ರಾ.ಪಂ.ಅಧ್ಯಕ್ಷರು ಕನ್ನಡ ಅರಿಯದ ಒಲ್ಲದ ಶಿಕ್ಷಿಯನ್ನು ನೇಮಕಮಾಡಿರುವುದು ಸ್ವೀಕಾರಾರ್ಹವಲ್ಲ. ಇದರಿಂದ ಅಂಗನವಾಡಿಯ ಬಹುಸಂಖ್ಯಾತ ಕನ್ನಡ-ತುಳು ಭಾಷಿಕ ಪುಟಾಣಿಗಳ ಕಲಿಕೆ ಅತಂತ್ರತೆಯಲ್ಲಿದೆ. ಕನ್ನಡ ವಿರೋಧಿ ಕ್ರಮಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸಿ ಹಕ್ಕು ಸಂರಕ್ಷಣೆಗಾಗಿ ಕಠಿಣ ನಿಲುವು ತಳೆಯಬೇಕಾದೀತೆಂದು ಅವರು ಎಚ್ಚರಿಸಿದರು.
ಕೋರಿಕಂಡ ಅಂಗನವಾಡಿ ಕನ್ನಡ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಅಶೋಕ ಸರಳಾಯ ಅಂಬತ್ತಿಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಗಿರುವ ಸಮಸ್ಯೆಯ ಬಗ್ಗೆ ಹಲವು ಬಾರಿ ಅಧಿಕೃತರಿಗೆ ಮನವಿ ನೀಡಿದ್ದರೂ ಪರಿಹಾರ ಕಲ್ಪಿಸದೆ ದಾಢ್ರ್ಯದಿಂದ ಮುಂದುವರಿರುವ ನಿರ್ಲಕ್ಷ್ಯ ಖಂಡನೀಯ. ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ ಹಿರಿಮೆಯ ದೇಲಂಪಾಡಿಯ ಚರಿತ್ರೆಗೆ ಕಪ್ಪುಚುಕ್ಕೆಯಾಗುವ ಇಂತಹ ಹುನ್ನಾರಗಳಿಗೆ ತಕ್ಕಬೆಲೆ ನೀಡಬೇಕಾಗುತ್ತದೆ ಎಂದು ಖಂಡಿಸಿದರು.
ಕಾಸರಗೋಡು ಕರ್ನಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ. ಮುರಳೀಧರ ಬಳ್ಳುಕ್ಕುರಾಯ ಅವೆರು ಮಾತನಾಡಿ, ಭಾಷಾವಾರು ಪ್ರಾಂತ ವಿಭಜನೆಯ ಬಳಿಕ ಕಾಸರಗೋಡಿನ ಕನ್ನಡಿಗರ ಮೇಲೆ ದಿನದಿಂದ ದಿನಕ್ಕಡೆ ಬೆಳೆಯುತ್ತಿರುವ ಅವಗಣನೆ ಇದೀಗ ತೀವ್ರ ಸ್ವರೂಪದತ್ತ ಹೊರಳುತ್ತಿದ್ದು, ಕನ್ನಡಿಗರ ಶಾಂತ ಮನೋಸ್ಥಿತಿಯನ್ನು ಕೆದಕುವ, ತಾಳ್ಮೆ ಪರೀಕ್ಷಿಸುವ ಯತ್ನಗಳಿಗೆ ಒಂದುದಿನ ಉತ್ತರ ನೀಡಲಾಗುತ್ತದೆ. ನ್ಯಾಯಾಲಯಗಳ ತೀರ್ಪಿಗಳ ಹೊರತಾಗಿಯೂ ಕನ್ನಡ ಅವಗಣನೆಯ ಯತ್ನಗಳು ಮುಂದುವರಿಯುತ್ತಿರುವುದು ಕಳವಳಕಾರಿ ಎಂದರು.
ಕರ್ನಾಟಕ ಸಮಿತಿಯ ಜಯನಾರಾಯಣ ತಾಯನ್ನೂರು ಮಾತನಾಡಿದರು. ಸಾಹಿತಿ, ಸಂಘಟಕ ಸುಂದರ ಬಾರಡ್ಕ, ಗ್ರಾ.ಪಂ.ಸದಸ್ಯೆ ಪ್ರಮೀಳಾ ಸಿ.ನಾಯ್ಕ್, ಗಂಗಾಧರ ಅಡೂರು ಮೊದಲಾದವರು ನೇತೃತ್ವ ವಹಿಸಿದ್ದರು. ಕೋರಿಕಂಡ ಅಂಗನವಾಡಿ ಕನ್ನಡ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ನಯನಾ ಅಡೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗಂಗಾದರ ವಂದಿಸಿದರು. ಇದಕ್ಕೂ ಮೊದಲು ಅಡೂರು ಶ್ರೀಮಹಾಲಿಂಗೇಶ್ವರ ಕ್ಷೇತ್ರ ಪರಿಸರದಿಂದ ಗ್ರಾ.ಪಂ.ಕಾರ್ಯಲಯದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಕನ್ನಡ ಭಾಷೆಯ ಸಂರಕ್ಷಣೆಗಾಗಿ ಘೋಷಣೆಗಳನ್ನು ಮೊಳಗಿಸಲಾಯಿತು. ಪ್ರತಿಭಟನೆ ಬಳಿಕ ಗ್ರಾ.ಪಂ.ಅಧ್ಯಕ್ಷೆ ನ್ಯಾಯವಾದಿ.ಉಷಾ ಅವರ ಬಳಿ ತೆರಳಿ ಹಕ್ಕು ಸಂರಕ್ಷಣೆಗಾಗಿ ಮನವಿ ಸಲ್ಲಿಸಲಾಯಿತು. 60 ಕ್ಕಿಂತಲೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.