ಸ್ಯಾನ್ ಫ್ರಾನ್ಸಿಸ್ಕೊ: ಅಮೆರಿಕ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು, ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಆಯ್ಕೆಯಾಗಿರುವ ಮಿಚೆಲ್ ವಾಲ್ಸ್ಟ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ವೃದ್ಧಿ ಹಾಗೂ ಜಾಗತಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಮುಂದಿನ ವರ್ಷ ಆಡಳಿತಕ್ಕೆ ಬರಲಿರುವ ಟ್ರಂಪ್ ಸರ್ಕಾರದ ನಿಯೋಜಿತ ಅಧಿಕಾರಿಗಳೊಂದಿಗಿನ ಭಾರತದ ಮೊದಲ ಸಭೆ ಇದಾಗಿದೆ.
ಈ ಸಂಜೆ ವಾಲ್ಸ್ಟ್ ಅವರನ್ನು ಭೇಟಿಯಾಗಲು ಸಂತೋಷವಾಯಿತು' ಎಂದು ಭೇಟಿ ಬಳಿಕ ಜೈಶಂಕರ್ ಶುಕ್ರವಾರ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
'ನಮ್ಮ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಹಾಗೂ ಸದ್ಯದ ಜಾಗತಿಕ ವಿಷಯಗಳ ಬಗ್ಗೆ ವಿಸ್ತಾರ ಮಾತುಕತೆ ನಡೆಯಿತು. ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ' ಎಂದು ಜೈಶಂಕರ್ ಹೇಳಿದ್ದಾರೆ.
ಜನವರಿ 20 ರಂದು ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಮಿಚೆಲ್ ವಾಲ್ಸ್ಟ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರನ ಹುದ್ದೆ ಅಲಂಕರಿಸಲಿದ್ದಾರೆ.
ಡಿ. 24 ರಿಂದ 29ರವರೆಗೆ ಜೈಶಂಕರ್ ಅವರ ಅಮೆರಿಕ ಪ್ರವಾಸ ನಿಗದಿಯಾಗಿದೆ.