ನವದೆಹಲಿ: ಲೋಕಸಭೆಯಲ್ಲಿ ಸುಗಮ ಕಲಾಪಕ್ಕೆ ಮನವಿ ಮಾಡಿರುವ ವಿರೋಧ ಪಕ್ಷಗಳ ಸಂಸದರು, ಒಂದು ಕೈಯಲ್ಲಿ ಪುಟ್ಟದಾದ ತ್ರಿವರ್ಣ ಧ್ವಜ ಮತ್ತೊಂದು ಕೈಯಲ್ಲಿ ಕೆಂಪು ಗುಲಾಬಿಯೊಂದಿಗೆ ಆಡಳಿತ ಬಿಜೆಪಿ ಪಕ್ಷದ ಸದಸ್ಯರನ್ನು ಸ್ವಾಗತಿಸಿದರು.
ಸಂಸತ್ತಿನಲ್ಲಿ ಸುಗಮ ಕಲಾಪ ನಡೆಯಲು ಮತ್ತು ಅದಾನಿ ಪ್ರಕರಣ ಸೇರಿದಂತೆ ಎಲ್ಲ ವಿಷಯಗಳ ಕುರಿತು ಚರ್ಚಿಸುವಂತೆ ವಿಪಕ್ಷಗಳ ಸಂಸದರು ಒತ್ತಾಯಿಸಿದರು.
ಚಳಿಗಾಲದ ಅಧಿವೇಶನ ಆರಂಭವಾದ ದಿನದಿಂದಲೇ ಅದಾನಿ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ ಆವರಣದಲ್ಲಿ ಪ್ರತಿದಿನ ವಿನೂತನ ರೀತಿಯಲ್ಲಿ ವಿಪಕ್ಷಗಳ ನಾಯಕರು ಪ್ರತಿಭಟಿಸುವ ಮೂಲಕ ಗಮನ ಸೆಳೆದಿದ್ದಾರೆ.
ಸಂಸತ್ತಿನ ಆವರಣಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಪ್ರವೇಶಿಸಿದಾಗ ಅವರಿಗೆ ತ್ರಿವರ್ಣ ಧ್ವಜದ ಕಾರ್ಡ್ ನೀಡುವ ಮೂಲಕ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸ್ವಾಗತಿಸಿದರು.
ವಯನಾಡು ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಗಾಂಧಿ ಸಹ ಭಾಗಿಯಾದರು. ವಿಪಕ್ಷಗಳ ಸಂಸದರು ಅದಾನಿ ವಿಷಯದಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚನೆಗೆ ಒತ್ತಾಯಿಸಿದರು.