ಗಯಾ: ಭಾರತಕ್ಕೆ ಭೇಟಿ ನೀಡಿರುವ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರು ಮಂಗಳವಾರ ಬಿಹಾರದ ಪ್ರಸಿದ್ಧ ಬೌದ್ಧ ಯಾತ್ರಾ ಸ್ಥಳವಾದ ಬೋಧ ಗಯಾದ ಮಹಾಬೋಧಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಗಯಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ ದಿಸ್ಸನಾಯಕೆ ಅವರು ನೇರವಾಗಿ 1,500 ವರ್ಷಗಳ ಇತಿಹಾಸವಿರುವ ಮಹಾಬೋಧಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಬುದ್ಧನ ಜೀವನಕ್ಕೆ ಸಂಬಂಧಪಟ್ಟ ನಾಲ್ಕು ಪವಿತ್ರ ತಾಣಗಳಲ್ಲಿ ಇದು ಒಂದಾಗಿದೆ.
ಗಯಾ ಜಿಲ್ಲಾಧಿಕಾರಿ ತ್ಯಾಗರಾಜನ್ ಎಸ್.ಎಂ., ಬೋಧಗಯಾ ದೇವಸ್ಥಾನ ನಿರ್ವಹಣಾ ಸಮಿತಿ(ಬಿಟಿಎಂಸಿ) ಕಾರ್ಯದರ್ಶಿ ಮಹಾಶ್ವೇತ ಮಹಾರತಿ ಮತ್ತು ಇತರರು ದಿಸ್ಸನಾಯಕೆ ಅವರೊಂದಿಗೆ ಇದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಟಿಎಂಸಿ ಕಾರ್ಯದರ್ಶಿ ಮಹಾರತಿ, 'ದೇಗುಲದ ಗರ್ಭಗುಡಿಗೆ ಶ್ರೀಲಂಕಾ ಅಧ್ಯಕ್ಷರು ಪ್ರಾರ್ಥನೆ ಸಲ್ಲಿಸಿದ್ದಾರೆ. ಪವಿತ್ರ ಬೋಧಿ ವೃಕ್ಷ ಸೇರಿದಂತೆ ಬುದ್ಧನಿಗೆ ಸಂಬಂಧಪಟ್ಟ ಪ್ರಮುಖ ಸ್ಥಳಗಳಿಗೆ ಅವರು ಭೇಟಿ ನೀಡಿದರು' ಎಂದು ಹೇಳಿದರು.
ಬೋಧ ಗಯಾಕ್ಕೆ ಭೇಟಿ ನೀಡಿರುವ ಕುರಿತು ಶ್ರೀಲಂಕಾ ಅಧ್ಯಕ್ಷರ ಮಾಧ್ಯಮ ವಿಭಾಗ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ.