ಮಥುರಾ: 'ತ್ವರಿತ ನ್ಯಾಯಾಲಯಗಳ ಮೂಲಕ ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ಹಾಗೂ ಶ್ರೀಕೃಷ್ಣ ಜನ್ಮಭೂಮಿ-ಈದ್ಗಾ ಮಸೀದಿಗೆ ಸಂಬಂಧಿಸಿದ ವ್ಯಾಜ್ಯಗಳ ವಿಚಾರಣೆ ನಡೆಸಬೇಕು' ಎಂದು ವಿವಿಧ ರಾಜ್ಯಗಳ 54 ಹಿಂದೂ ಸಂಘಟನೆಗಳು ಒತ್ತಾಯಿಸಿವೆ.
ವೃಂದಾವನದ 'ಹಿಂದೂ ಜನಜಾಗೃತಿ ಸಮಿತಿ'ಯು ಶನಿವಾರ ಮಥುರಾದಲ್ಲಿ ಸಮಾವೇಶವೊಂದನ್ನು ಆಯೋಜಿಸಿತ್ತು.
'ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿ ಆನ್‌ಲೈನ್‌ನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗುವುದು' ಎಂದು ಈ ಸಮಿತಿ ಘೋಷಿಸಿದೆ.
'ಅಕ್ರಮವಾಗಿ ಹಲಾಲ್ ಪ್ರಮಾಣಪತ್ರವನ್ನು ವಿತರಿಸುವುದನ್ನು ನಿಷೇಧಿಸಬೇಕು. ಜೊತೆಗೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ಭಾರತ ಸರ್ಕಾರ ಮುಂದಾಗಬೇಕು' ಎನ್ನುವ ಆಗ್ರಹವನ್ನೂ ಈ ಸಮಾವೇಶದಲ್ಲಿ ಮಾಡಲಾಗಿದೆ.
'ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ, ಮಧ್ಯ ಪ್ರದೇಶ, ಹರಿಯಾಣ, ಉತ್ತರಾಖಂಡ ಹಾಗೂ ಜಮ್ಮುವಿನ ಸುಮಾರು 54 ಹಿಂದೂ ಸಂಘಟನೆಗಳು ಸಮಾವೇಶದಲ್ಲಿ ಭಾಗವಹಿಸಿದ್ದವು. ಸಂತರು, ವಕೀಲರು, ಬುದ್ಧಿಜೀವಿಗಳು, ದೇವಸ್ಥಾನಗಳ ಟ್ರಸ್ಟಿಗಳು, ಸಂಪಾದಕರು, ಉದ್ಯಮಿಗಳು, ಆರ್‌ಟಿಐ ಕಾರ್ಯಕರ್ತರು ಸೇರಿ ಒಟ್ಟು 120 ಪ್ರತಿನಿಧಿಗಳು ಭಾಗವಹಿಸಿದ್ದರು' ಎಂದು ಸಮಿತಿ ಹೇಳಿದೆ.