ಲಂಡನ್: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆಯೇ, ನಾಸಾದ ಪ್ರಮುಖ ಯೋಜನೆಯಾದ 'ಚಂದ್ರನೆಡೆಗೆ ಬೃಹತ್ ರಾಕೆಟ್' ಕಳುಹಿಸುವ ಯೋಜನೆ ಮುಂದುವರಿಸುವ ಕುರಿತಂತೆ ಅನಿಶ್ಚಿತತೆ ಮೂಡಿದೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ (ನಾಸಾ) 'ಆರ್ಟೆಮಿಸ್' ಯೋಜನೆಗಳ ಜಾರಿಯಲ್ಲಿ ರಾಕೆಟ್ ಅತ್ಯಂತ ಮುಖ್ಯವಾದುದು.
ಚಂದ್ರನಲ್ಲಿಗೆ ಮಾನವ ಕಾಲಿಟ್ಟು, ಮರಳಿ ಭೂಮಿಗೆ ಬರುವ ಯೋಜನೆಯನ್ನೂ 'ಆರ್ಟೆಮಿಸ್' ಒಳಗೊಂಡಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿರುವ ಸ್ಥಳದ ಅನ್ವೇಷಣೆಗಾಗಿ ಮೊದಲ ಬಾರಿಗೆ ಮನುಷ್ಯನನ್ನು ಕಳುಹಿಸುವ ಯೋಜನೆ 'ಅರ್ಟೆಮಿಸ್-3'.
ಇದಕ್ಕಾಗಿ ನಾಸಾದ 'ಒರಿಯಾನ್' ವ್ಯೋಮನೌಕೆ (ಕ್ಯಾಪ್ಸೂಲ್) ಮೂಲಕ ನಾಲ್ವರು ಗಗನಯಾತ್ರಿಗಳನ್ನು ಚಂದ್ರನಲ್ಲಿಗೆ ಕಳುಹಿಸಲಾಗುತ್ತದೆ. ಭೂಮಿಯಿಂದ ಹೊರಡುವ ವ್ಯೋಮನೌಕೆಯು ಚಂದ್ರನ ಕಕ್ಷೆಗೆ ತಲುಪಿದ ನಂತರ, ಎಲಾನ್ ಮಸ್ಕ್ ಅವರ 'ಸ್ಟಾರ್‌ಶಿಪ್' ನೌಕೆ ಮೂಲಕ (ಇದನ್ನು ಪ್ರತ್ಯೇಕವಾಗಿ ಉಡಾವಣೆ ಮಾಡಲಾಗಿರುತ್ತದೆ) ಗಗನಯಾತ್ರಿಗಳು ಚಂದ್ರನ ಮೇಲ್ಮೈ ಮೇಲೆ ಸುತ್ತಾಡಲಿದ್ದಾರೆ. ಚಂದ್ರನ ಮೇಲೆ ನಡೆದಾಡಿದ ಬಳಿಕ ಇಬ್ಬರು ಗಗನಯಾತ್ರಿಗಳು 'ಸ್ಟಾರ್‌ಶಿಪ್' ಮೂಲಕ ಮರಳಿ ಚಂದ್ರನ ಕಕ್ಷೆಗೆ ತಲುಪಿ, 'ಒರಿಯಾನ್' ವ್ಯೋಮನೌಕೆ ಇರುವ ಸ್ಥಳ ತಲುಪಲಿದ್ದಾರೆ. ನಂತರ ಇನ್ನಿಬ್ಬರೂ ಅದೇ ರೀತಿಯಲ್ಲಿ ವ್ಯೋಮನೌಕೆಯ ಸ್ಥಳ ಸೇರಿಕೊಳ್ಳುವರು.
ಈ ಬೆಳವಣಿಗೆ ಕುರಿತಂತೆ ಪ್ರತಿಕ್ರಿಯಿಸಿರುವ ಅಮೆರಿಕದ ಬಾಹ್ಯಾಕಾಶ ಪತ್ರಕರ್ತ ಎರಿಕ್ ಬರ್ಗರ್, 'ನಾಸಾದ ಚಂದ್ರನೆಡೆಗೆ ರಾಕೆಟ್ ಕಳುಹಿಸುವ ಯೋಜನೆ ರದ್ದಾಗುವ ಸಾಧ್ಯತೆ ಶೇ 50-50ರಷ್ಟಿದೆ' ಎಂದು 'ಎಕ್ಸ್'ನಲ್ಲಿ ಬರೆದಿದ್ದಾರೆ.
ಈ ಕುರಿತಂತೆ ನಾಸಾದಿಂದ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ.