ನವದೆಹಲಿ: 'ಒಂದು ರಾಷ್ಟ್ರ ಒಂದು ಚುನಾವಣೆ' ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸುವುದನ್ನು ಸರ್ಕಾರ ಮುಂದೂಡಿದೆ.
ಈ ಮೊದಲು ಸಂವಿಧಾನ(129ನೇ ತಿದ್ದುಪಡಿ) ಮಸೂದೆ(ಒಂದು ರಾಷ್ಟ್ರ ಒಂದು ಚುನಾವಣೆ) ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು(ತಿದ್ದುಪಡಿ) ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲು ಪಟ್ಟಿ ಮಾಡಲಾಗಿತ್ತು.
ಸೋಮವಾರ ಮಂಡನೆಯಾಗಲಿರುವ ವಿವಿಧ ಮಸೂದೆಗಳಿಗೆ ಅಂಗೀಕಾರ ದೊರೆತ ನಂತರ 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆಯನ್ನು ಈ ವಾರದ ಕೊನೆಯಲ್ಲಿ ಮಂಡಿಸಬಹುದು ಎಂದು ಮೂಲಗಳು ತಿಳಿಸಿವೆ.
'ಒಂದು ರಾಷ್ಟ್ರ ಒಂದು ಚುನಾವಣೆ' ಮಸೂದೆಯ ಕರಡು ಪ್ರತಿಯನ್ನು ಈಗಾಗಲೇ ಸರ್ಕಾರ ಸಂಸದರಿಗೆ ನೀಡಿದ್ದು, ಸೋಮವಾರ ಕಲಾಪದಲ್ಲಿ ಈ ಮಸೂದೆ ಮಂಡನೆಯಾಗುತ್ತದೆ ಎಂದು ಹೇಳಲಾಗಿತ್ತು.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ. ಈ ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದ ಸರ್ಕಾರ, ಅವರಿಂದ 18 ಸಾವಿರಕ್ಕೂ ಹೆಚ್ಚು ಪುಟಗಳ ವರದಿಯನ್ನು ಪಡೆದಿತ್ತು. ಕೇಂದ್ರ ಸಚಿವ ಸಂಪುಟದಲ್ಲಿಯೂ ಮಸೂದೆಗೆ ಒಪ್ಪಿಗೆ ದೊರಕಿತ್ತು.
ಡಿಸೆಂಬರ್ 20ರಂದು ಲೋಕಸಭೆಯ ಚಳಿಗಾಲದ ಅಧಿವೇಶನ ಮುಕ್ತಾಯಗೊಳ್ಳಲಿದೆ.