ಪುಣೆ: ದೇಶದಲ್ಲಿ ಹೊಸದಾಗಿ ಮಂದಿರ -ಮಸೀದಿಗಳ ವಿವಾದಗಳನ್ನು ಹುಟ್ಟುಹಾಕುತ್ತಿರುವುದಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
'ಕೆಲವು ವ್ಯಕ್ತಿಗಳು, ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ನಂತರ, ಅಂತಹ ವಿವಾದಗಳನ್ನು ಕೆರಳಿಸುವ ಮೂಲಕ ಹಿಂದೂಗಳ ನಾಯಕರಾಗಬಹುದೆಂದು ಭಾವಿಸಿದ್ದಾರೆ.
ಆದರೆ, ಅದು ಸ್ವೀಕಾರಾರ್ಹವಲ್ಲ' ಎಂದೂ ಅವರು ಹರಿಹಾಯ್ದಿದ್ದಾರೆ.
ಗುರುವಾರ ಇಲ್ಲಿ ಸಹಜೀವನ ವ್ಯಾಖ್ಯಾನಮಾಲಾದಲ್ಲಿ (ಉಪನ್ಯಾಸ ಮಾಲಿಕೆ) 'ಭಾರತ - ವಿಶ್ವಗುರು' ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಎಲ್ಲರನ್ನೂ ಒಳಗೊಳ್ಳುವ ಸಮಾಜದ ಅಗತ್ಯವಿದೆ. ದೇಶವು ಸಾಮರಸ್ಯದಿಂದ ಬದುಕಬಹುದು ಎಂಬುದನ್ನು ಜಗತ್ತಿಗೆ ತೋರಿಸಬೇಕಾಗಿದೆ ಎಂದರು.
ಭಾರತೀಯ ಸಮಾಜದ ಬಹುತ್ವವನ್ನು ಎತ್ತಿ ತೋರಿಸಿದ ಅವರು, 'ರಾಮಕೃಷ್ಣ ಮಿಷನ್‌ನಲ್ಲಿ ಕ್ರಿಸ್‌ಮಸ್ ಆಚರಿಸಲಾಗುತ್ತದೆ. ನಾವು ಹಿಂದೂಗಳಾಗಿರುವುದರಿಂದ ಮಾತ್ರ ಇದನ್ನೆಲ್ಲವನ್ನು ಮಾಡುತ್ತಿದ್ದೇವೆ' ಎಂದು ಹೇಳಿದರು.
'ನಾವು ಅನಾದಿ ಕಾಲದಿಂದಲೂ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಈ ಸೌಹಾರ್ದವನ್ನು ನಾವು ಜಗತ್ತಿಗೆ ನೀಡಬೇಕಾದರೆ, ನಾವು ಅದರ ಮಾದರಿಯನ್ನು ರೂಪಿಸಬೇಕಾಗಿದೆ' ಎಂದು ಅವರು ಅಭಿಪ್ರಾಯಪಟ್ಟರು. 'ಹಿಂದೂಗಳ ನಂಬಿಕೆಯ ವಿಷಯವಾಗಿದ್ದರಿಂದ ರಾಮಮಂದಿರವನ್ನು ನಿರ್ಮಿಸಲಾಗಿದೆ' ಎಂದು ಹೇಳಿದ ಭಾಗವತ್, 'ಪ್ರತಿದಿನ ಹೊಸ ವಿವಾದ ಉದ್ಭವಿಸುತ್ತಿವೆ. ಇದಕ್ಕೆ ಹೇಗೆ ಅನುಮತಿಸುವುದು? ಇಂತಹದ್ದನ್ನು ಮುಂದುವರಿಸಲು ಸಾಧ್ಯವಿಲ್ಲ. ನಾವೆಲ್ಲರೂ ಒಟ್ಟಿಗೆ ಬದುಕಬಲ್ಲೆವು ಎಂಬುದನ್ನು ಭಾರತವು ತೋರಿಸಬೇಕಾಗಿದೆ' ಎಂದು, ಯಾವುದೇ ನಿರ್ದಿಷ್ಟ ವಿವಾದಿತ ಸ್ಥಳ ಉಲ್ಲೇಖಿಸದೇ ಹೇಳಿದರು.
ದೇವಾಲಯಗಳ ಪುನರುತ್ಥಾನಕ್ಕೆ ಮಸೀದಿಗಳ ಸಮೀಕ್ಷೆ ನಡೆಸಬೇಕೆಂಬ ಬೇಡಿಕೆಗಳು ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳ ಮೆಟ್ಟಿಲೇರಿರುವಾಗ, ಭಾಗವತ್ ತಮ್ಮ ಉಪನ್ಯಾಸದಲ್ಲಿ ಯಾವುದನ್ನೂ ಉಲ್ಲೇಖಿಸಲಿಲ್ಲ.
'ಹೊರಗಿನಿಂದ ಬಂದ ಕೆಲವು ಗುಂಪುಗಳು ತಮ್ಮೊಂದಿಗೆ ಸ್ಥೈರ್ಯವನ್ನು ತಂದವು. ಅವರು ತಮ್ಮ ಹಳೆಯ ಆಡಳಿತ ಹಿಂದಿರುಗಿಸಬೇಕೆಂದು ಬಯಸುತ್ತಾರೆ. ಆದರೆ, ಈಗ ಸಂವಿಧಾನದ ಪ್ರಕಾರ ದೇಶ ನಡೆಯುತ್ತಿದೆ. ಈ ವ್ಯವಸ್ಥೆಯಲ್ಲಿ, ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ, ಅವರು ಸರ್ಕಾರವನ್ನು ನಡೆಸುತ್ತಾರೆ. ಹೊರಗಿನವರ ಪ್ರಾಬಲ್ಯದ ದಿನಗಳು ಮುಗಿದುಹೋಗಿವೆ' ಎಂದರು.
'ಮೊಘಲ್ ಚಕ್ರವರ್ತಿ ಔರಂಗಜೇಬನ ಆಳ್ವಿಕೆಯು ಅಂತಹ ದೃಢತೆಯಿಂದ ಕೂಡಿತ್ತು. ಅವರ ವಂಶಸ್ಥ ಬಹದ್ದೂರ್ ಶಾ ಜಾಫರ್ 1857ರಲ್ಲಿ ಗೋಹತ್ಯೆ ನಿಷೇಧಿಸಿದ್ದರು' ಎಂದು ಪ್ರಶಂಸಿಸಿದರು.