ಬದಿಯಡ್ಕ: ಕಾಸರಗೋಡು ಜಿಲ್ಲೆಯ ಇಬ್ಬರು ಪ್ರತಿಭಾವಂತ ಕ್ರೀಡಾಳುಗಳು ಸೀನಿಯರ್ ವಿಭಾಗದ ಹುಡುಗರ ತ್ರೋಬೋಲ್ ಚಾಂಪಿಯನ್ ಶಿಫ್ ಗಿರುವ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಾಸರಗೋಡು ನಿವಾಸಿಗಳಾದ ಧನುಷ್ ಕೆ.ಹಾಗೂ ಬಸವರಾಜ್ ಅವರು ನೇಪಾಳದಲ್ಲಿ ಈ ತಿಂಗಳು 16 ರಿಂದ 21 ರವರೆಗೆ ನಡೆಯುವ ಅಂತರಾಷ್ಟ್ರೀಯ ಮಟ್ಟದ ತ್ರೋ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ತಂಡವನ್ನು ಪ್ರತಿನಿಧೀಕರಿಸುವರು. ಕಳೆದ ಹಲವಾರು ವರ್ಷಗಳಿಂದ ಸೀನಿಯರ್ ವಿಭಾಗದಲ್ಲಿ ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧೀಕರಿಸಿದ ಧನುಷ್ ದೇಶಿಯ ಸ್ಪರ್ಧೆಗಳಲ್ಲೂ ಕೇರಳ ತಂಡದ ಸದಸ್ಯರಾಗಿದ್ದರು. ಮೂಲತ ಅಗಲ್ಪಾಡಿ ಗ್ರಾಮ ನಿವಾಸಿಯಾದ ಧನುಷ್ ಪ್ರೌಢ ಶಿಕ್ಷಣವನ್ನು ಎಸ್.ಎ.ಪಿ.ಎಚ್.ಎಸ್ ಅಗಲ್ಪಾಡಿ ಹಾಗೂ ಪ್ಲಸ್ ಟು ಶಿಕ್ಷಣವನ್ನು ಎಂ.ಎಸ್.ಸಿ.ಎಚ್.ಎಸ್. ನೀರ್ಚಾಲಿನಲ್ಲಿ ಪಡೆದಿರುತ್ತಾರೆ. ಕುಂಬ್ಡಾಜೆ ನಿವಾಸಿ ಶ್ರೀಧರ ಕೆ. ಹಾಗೂ ಇಂದಿರ ದಂಪತಿಗಳ ಪುತ್ರ.
ಮೂಲತಃ ಕರ್ನಾಟಕ ನಿವಾಸಿಯಾದ ಬಸವರಾಜ್ ಕಳೆದ ಹಲವಾರು ವರ್ಷಗಳಿಂದ ಜಿಲ್ಲಾ ಸೀನಿಯರ್ ಹುಡುಗರ ತಂಡದ ಸದಸ್ಯ ಹಾಗೂ ಮೂರು ಬಾರಿ ನ್ಯಾಷನಲ್ ಪಂದ್ಯಾಟದಲ್ಲಿ ಕೇರಳ ತಂಡದ ಸದಸ್ಯರಾಗಿದ್ದರು. ಒಮ್ಮೆ ಕೇರಳ ತಂಡದ ನಾಯಕ ಹಾಗೂ ಎರಡು ಬಾರಿ ಉಪನಾಯಕನಾಗಿದ್ದನು. ಬಸವರಾಜ್ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪ್ಲಸ್ ಟು ವರೆಗೆ ಮೀಯಪದವು ವಿದ್ಯಾವರ್ಧಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾನೆ. ಕೊಪ್ಪಳ ನಿವಾಸಿ ಶರಣಪ್ಪ ಹಾಗೂ ಚಂದ್ರಮ್ಮ ದಂಪತಿಗಳ ಪುತ್ರ. ದೇಶಿಯ ತಂಡಕ್ಕೆ ಆಯ್ಕೆಯಾದ ಇವರನ್ನು ರಾಜ್ಯ ತ್ರೋ ಬಾಲ್ ಉಪಾಧ್ಯಕ್ಷ ಶಶಿಕಾಂತ್ ಜಿ .ಆರ್, ಜಿಲ್ಲಾ ಅಸೋಸಿಯೇಷನ್ ಅಧ್ಯಕ್ಷ ಕೆ. ಸೂರ್ಯನಾರಾಯಣ ಭಟ್, ಕಾರ್ಯದರ್ಶಿ ಸಂತೋಷ್ ಪಿ.ಯಚ್.ಅಭಿನಂದಿಸಿದ್ದಾರೆ.