ಸೋಲ್ : ಸೇನಾ ಆಡಳಿತ ಹೇರಿಕೆ ಪ್ರಕರಣ ಸಂಬಂಧ ಬಂಧನದಲ್ಲಿರುವ ದಕ್ಷಿಣ ಕೊರಿಯಾ ಮಾಜಿ ರಕ್ಷಣಾ ಸಚಿವ ಕಿಮ್ ಯಾಂಗ್ ಹ್ಯೂನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
'ಮಾಜಿ ರಕ್ಷಣಾ ಸಚಿವ ಕಿಮ್ ಅವರು ನಿನ್ನೆ ರಾತ್ರಿ ಸಿಯೋಲ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಅಧಿಕಾರಿಗಳು ಅವರನ್ನು ತಡೆದಿದ್ದಾರೆ ಮತ್ತು ಅವರ ಆರೋಗ್ಯ ಈಗ ಸ್ಥಿರವಾಗಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಂಗೆಗೆ ಕಾರಣವಾದ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿ ಸೋಲ್ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದ ಬಳಿ ಕಿಮ್ ಅವರನ್ನು ಬಂಧಿಸಲಾಗಿದೆ. ಸೇನಾ ಆಡಳಿತ ಹೇರಿಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಮೊದಲ ಬಂಧನ ಇದಾಗಿದೆ.
ದೇಶದಲ್ಲಿ ಸೇನಾ ಆಡಳಿತ ಹೇರಿಕೆಗೆ ಅಧ್ಯಕ್ಷ ಯುನ್ ಸುಕ್ ಯೋಲ್ ಅವರು ಯತ್ನಿಸಿದ್ದರು. ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಘೋಷಣೆಯನ್ನು ಹಿಂಪಡೆದಿದ್ದರು.
ಅಧ್ಯಕ್ಷ ಯುನ್ ಆಪ್ತರಾಗಿದ್ದ ಕಿಮ್, ಈ ಕಾನೂನಿನ ಹೇರಿಕೆಗೆ ಸಲಹೆ ನೀಡಿದ ಮತ್ತು ಅದರ ವಿರುದ್ಧ ಮತ ಚಲಾವಣೆಯಾಗದಂತೆ ತಡೆಯಲು ರಾಷ್ಟ್ರೀಯ ಅಸೆಂಬ್ಲಿಗೆ ಸೈನ್ಯವನ್ನು ಕಳುಹಿಸಿದ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಕಾನೂನಿನ ವಿರುದ್ಧದ ಮತ ಚಲಾವಣೆಯನ್ನು ತಡೆಯಲು ಸಂಸತ್ತಿಗೆ ಪೊಲೀಸ್ ಪಡೆಯನ್ನು ಕಳುಹಿಸಿದ ಆರೋಪದಡಿ ರಾಷ್ಟ್ರೀಯ ಪೊಲೀಸ್ ಏಜೆನ್ಸಿ ಕಮಿಷನರ್ ಜನರಲ್, ಸೋಲ್ ನಗರ ಪೊಲೀಸ್ ಮುಖ್ಯಸ್ಥರನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.
ದೇಶದಲ್ಲಿ ಉಂಟಾದ ದಂಗೆಯಲ್ಲಿ ಯೂನ್, ಕಿಮ್ ಮತ್ತು ಇತರರು ಭಾಗಿಯಾಗಿದ್ದಾರೆಯೇ ಎಂಬುವುದನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ.
ಪ್ರಕರಣ ಸಂಬಂಧ ಅಧ್ಯಕ್ಷ ಯೂನ್ ಅವರ ಕಚೇರಿಯಲ್ಲಿ ಬುಧವಾರ ಶೋಧ ನಡೆಸಲು ಪೊಲೀಸರು ಮುಂದಾಗಿದ್ದರು ಆದರೆ ಭದ್ರತಾ ಸಿಬ್ಬಂದಿ ಅವರನ್ನು ಒಳಪ್ರವೇಶಿಸಲು ಬಿಡಲಿಲ್ಲ.