ಚಂಡೀಗಢ: ಧಾರ್ಮಿಕ ದುರ್ವರ್ತನೆ ತೋರಿದ್ದಕ್ಕಾಗಿ ಪಂಜಾಬ್ ಮಾಜಿ ಉಪ ಮುಖ್ಯಮಂತ್ರಿ, ಹಾಗೂ ಶಿರೋಮಣಿ ಅಕಾಲಿದಳ(ಎಸ್‌ಎಡಿ)ದ ಮಾಜಿ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ಗೆ ಧಾರ್ಮಿಕ ಶಿಕ್ಷೆ ನೀಡಲಾಗಿದೆ.
'ತಂಖಾಹ್' ಎಂದು ಕರೆಯಲ್ಪಡುವ ಅಕಾಲ್ ತಖ್ತ್ ಜತೇದಾರ್ ಗ್ಯಾನಿ ರಘಬೀರ್ ಸಿಂಗ್ ನೇತೃತ್ವದ ಐವರು ಪ್ರಧಾನ ಅರ್ಚಕರು ಸೋಮವಾರ ಸುಖಬೀರ್ ಬಾದಲ್ ಅವರಿಗೆ ಶಿಕ್ಷೆ ಘೋಷಿಸಿದ್ದು, ಅಮೃತಸರದ ಸ್ವರ್ಣ ಮಂದಿರದಲ್ಲಿ ಪಾತ್ರೆಗಳನ್ನು ತೊಳೆಯಲು ಮತ್ತು ಬೂಟುಗಳನ್ನು ಸ್ವಚ್ಛಗೊಳಿಸುವಂತೆ ಆದೇಶಿಸಲಾಗಿದೆ.
ಇದೇ ವೇಳೆ ಪಕ್ಷದ ಕಾರ್ಯಕಾರಿ ಸಮಿತಿಯು ಸುಖ್ಬೀರ್ ಅವರ ರಾಜೀನಾಮೆಯನ್ನು ಅಂಗೀಕರಿಸಬೇಕು ಮತ್ತು ಮೂರು ದಿನಗಳಲ್ಲಿ ಅಕಾಲ್ ತಖ್ತ್ಗೆ ವರದಿ ಮಾಡುವಂತೆ ಸೂಚಿಸಲಾಯಿತು. ಅಲ್ಲದೆ ಆರು ತಿಂಗಳೊಳಗೆ SAD ಅಧ್ಯಕ್ಷ ಮತ್ತು ಪದಾಧಿಕಾರಿಗಳ ಹುದ್ದೆಗೆ ಚುನಾವಣೆ ನಡೆಸಲು ಸಮಿತಿ ರಚಿಸುವಂತೆ ಸೂಚಿಸಲಾಗಿದೆ.
ಸಿಖ್ಖರ ಸರ್ವೋಚ್ಚ ಧಾರ್ಮಿಕ ಸಂಸ್ಥೆಯಾದ ಅಕಾಲ್ ತಖ್ತ್, ಮಾಜಿ ಮುಖ್ಯಮಂತ್ರಿ ದಿವಂಗತ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ನೀಡಲಾಗಿದ್ದ 'ಪಂಥ್ ರತನ್ ಫಖ್ರ್-ಎ-ಕ್ವಾಮ್' ಎಂಬ ಬಿರುದನ್ನು ಕೂಡ ಹಿಂತೆಗೆದುಕೊಂಡಿದೆ. ಧರ್ಮನಿಂದನೆ ಪ್ರಕರಣದ ಆರೋಪಿಯಾಗಿರುವ ಸ್ವಯಂ ಘೋಷಿತ ದೇವಮಾನವ ಮತ್ತು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ಕ್ಷಮಾದಾನ ನೀಡಿದ ಆರೋಪವನ್ನೂ ಅವರ ಮೇಲೆ ಹೊರಿಸಲಾಗಿದೆ.
SAD-ಬಿಜೆಪಿ ಸರ್ಕಾರದ ಸಿಖ್ ಮಂತ್ರಿಗಳು ಮತ್ತು ಪಕ್ಷದ ಕೋರ್ ಕಮಿಟಿ ಸದಸ್ಯರು 2007 ರಿಂದ 2017 ರವರೆಗೆ SAD ಅಧಿಕಾರಾವಧಿಯಲ್ಲಿ 'ವಿವಾದಾತ್ಮಕ' ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಸಿಖ್ ಪಂಥ್ ಗೆ ಹಾನಿ ಮಾಡಿದ ಮತ್ತು ಧಾರ್ಮಿಕ ದುರ್ವರ್ತನೆಗಾಗಿ ಬಾದಲ್ ತಪ್ಪಿತಸ್ಥರೆಂದು ಆಗಸ್ಟ್ 30 ರಂದು ಘೋಷಿಸಲಾಗಿತ್ತು. ಆದರೆ ಶಿಕ್ಷೆ ನೀಡಿರಲಿಲ್ಲ.
ಗಿಯಾನಿ ರಘ್‌ಬೀರ್ ಸಿಂಗ್ ಅವರು ಅಕಾಲ್ ತಖ್ತ್‌ನ ವೇದಿಕೆಯಿಂದ 'ತಪ್ಪಿತಸ್ಥ' ಅಕಾಲಿ ದಳದ ನಾಯಕರಾದ ಸುಖಬೀರ್ ಬಾದಲ್, ಸುಖದೇವ್ ಧಿಂಡ್ಸಾ, ಗುಲ್ಜಾರ್ ಸಿಂಗ್ ರಾಣಿಕೆ ಮತ್ತು ಜನ್ಮೇಜಾ ಸೆಖೋನ್ ಅವರು 'ಸೇವಾದಾರ್' ಸಮವಸ್ತ್ರವನ್ನು ಧರಿಸಿ ಪ್ರಾಯಶ್ಚಿತ್ತವಾಗಿ ಪಾತ್ರೆಗಳು ಮತ್ತು ಬೂಟುಗಳನ್ನು ಸ್ವಚ್ಛಗೊಳಿಸುವ 'ಸೇವೆ' ಮಾಡಲು ಆದೇಶಿಸಿದ್ದಾರೆ.
ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿ ಗಾಲಿಕುರ್ಚಿಯಲ್ಲಿರುವ ಸುಖಬೀರ್ ಬಾದಲ್ ಅವರ ಆರೋಗ್ಯದ ದೃಷ್ಟಿಯಿಂದ ಎರಡು ದಿನಗಳ ಕಾಲ ತಲಾ ಒಂದು ಗಂಟೆ ಕಾಲ ಸ್ವರ್ಣಮಂದಿರದ ಪ್ರವೇಶ ದ್ವಾರದಲ್ಲಿ ಕಾವಲುಗಾರನ ಡ್ರೆಸ್ ಧರಿಸಿ ಸೇವೆ ಸಲ್ಲಿಸುವಂತೆ ಸೂಚಿಸಲಾಗಿದೆ. ಇನ್ನು ಪಕ್ಷದ ಹಿರಿಯ ನಾಯಕ ಮತ್ತು ಈಗ ಬಂಡಾಯಗಾರ ಸುಖದೇವ್ ಸಿಂಗ್ ಧಿಂಡ್ಸಾ ಅವರ ವೃದ್ಧಾಪ್ಯ ಮತ್ತು ಅನಾರೋಗ್ಯದ ಕಾರಣಕ್ಕಾಗಿ ಅವರಿಗೂ ಇದೇ ರೀತಿಯ ಶಿಕ್ಷೆಯನ್ನು ನೀಡಲಾಗಿದೆ.