ನವದೆಹಲಿ: 'ದೇವಾಲಯಗಳಲ್ಲಿ ವಿತರಿಸಲಾಗುವ ಪ್ರಸಾದ ಅಥವಾ ಆಹಾರ ಗುಣಮಟ್ಟ ಪರೀಕ್ಷೆಯು ಸರ್ಕಾರದ ಕಾರ್ಯವ್ಯಾಪ್ತಿಯ ಭಾಗವಾಗಿದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಈ ವಿಷಯದಲ್ಲಿ ಸೂಕ್ತ ನಿರ್ದೇಶನ ನೀಡುವಂತೆ ಕೋರಿದ ಅರ್ಜಿಯನ್ನು ವಜಾಗೊಳಿಸಿದೆ.
'ಕಾರ್ಯಾಂಗವು ತನ್ನ ಇತಿಮಿತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ನ.26ರಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹೀಗಾಗಿ, ದೇಗುಲಗಳಲ್ಲಿ ವಿತರಿಸುವ ಪ್ರಸಾದ ಅಥವಾ ಆಹಾರ ಪದಾರ್ಥಗಳ ಗುಣಮಟ್ಟ ಕುರಿತು ನಿಯಮಾವಳಿ ರೂಪಿಸಬೇಕು' ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠವನ್ನು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 'ಈ ಅರ್ಜಿ ಹಾಗೂ ಅದರಲ್ಲಿನ ನಿವೇದನೆಯು ಸರ್ಕಾರದ ನೀತಿ ನಿರೂಪಣೆಗೆ ಸಂಬಂಧಿಸಿದ್ದು. ಹೀಗಾಗಿ ಈ ಅರ್ಜಿಯನ್ನು ಸೂಕ್ತ ಪ್ರಾಧಿಕಾರಕ್ಕೆ ಸಲ್ಲಿಸಿ' ಎಂದು ಹೇಳಿತು.
ವಿವಿಧ ದೇವಸ್ಥಾನಗಳಲ್ಲಿ ಅನ್ನ ಪ್ರಸಾದ ಅಥವಾ ಪ್ರಸಾದ ಸೇವಿಸಿದ ನಂತರ ಜನರು ಅಸ್ವಸ್ಥರಾಗುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆ ಪಿಐಎಲ್ ಸಲ್ಲಿಸಲಾಗಿದೆಯೇ ಹೊರತು ಪ್ರಚಾರದ ಉದ್ದೇಶದಿಂದಲ್ಲ ಎಂದು ಅರ್ಜಿದಾರರು ಪೀಠದ ಗಮನ ಸೆಳೆದಿದ್ದಾರೆ.
ಸರಬರಾಜಾದ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸುವ ವ್ಯವಸ್ಥೆ ಇಲ್ಲದಿರುವುದರಿಂದ ದೇವಸ್ಥಾನಗಳ ಪ್ರಸಾದಗಳಲ್ಲಿ ಅನರ್ಥವಾಗುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ.
'ಹಾಗಿದ್ದರೆ, ಪ್ರಸಾದದ ಗುಣಮಟ್ಟಕ್ಕೆ ಮಾತ್ರ ನಿಯಮಾವಳಿ ಕೋರಿ ಅರ್ಜಿ ಏಕೆ ಸಲ್ಲಿಸಿದ್ದೀರಿ? ಹೋಟೆಲ್ ಆಹಾರಗಳ ಮೇಲೂ ನಿಯಮಾವಳಿಗೆ ಅರ್ಜಿ ಸಲ್ಲಿಸಿ. ದಿನಸಿ ಅಂಗಡಿಗಳಲ್ಲಿ ಖರೀದಿಸುವ ಆಹಾರ ಪದಾರ್ಥಗಳ ಗುಣಮಟ್ಟವನ್ನೂ ಪ್ರಶ್ನಿಸಿ. ಅಲ್ಲಿಯೂ ಕಲಬೆರಕೆಯ ಆರೋಪಗಳಿವೆ'ಎಂದು ಪೀಠ ಹೇಳಿದೆ.
'ಇಂತಹ ವಿಷಯಗಳಲ್ಲಿ ಕ್ರಮ ಜರುಗಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ) ಅಧಿಕಾರ ಇದೆ. ಅದರೆ, ಕ್ರಮ ಕೈಗೊಳ್ಳುವುದಕ್ಕೆ ಅದರ ಮಾರ್ಗಸೂಚಿಗಳು ಅಡ್ಡಿಯಾಗುತ್ತಿವೆ. ಹೀಗಾಗಿ, ನಿಯಂತ್ರಣ ವ್ಯವಸ್ಥೆಗೆ ಮನವಿ ಮಾಡಲಾಗಿದೆ' ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.
ಆಗ, 'ಯಾವುದೇ ನಿರ್ದಿಷ್ಟ ದೇವಸ್ಥಾನ ಕುರಿತು ಪ್ರಕರಣವಿದ್ದಲ್ಲಿ, ಬಾಧಿತ ವ್ಯಕ್ತಿ ಸಂಬಂಧಪಟ್ಟ ಹೈಕೋರ್ಟ್‌ಗೆ ಮನವಿ ಸಲ್ಲಿಸಲಿ' ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.