ಎರ್ನಾಕುಳಂ: ಲೈಂಗಿಕ ದೌರ್ಜನ್ಯದ ದೂರಿನನ್ವಯ ಪ್ರಮುಖ ಚಲನಚಿತ್ರ ಮತ್ತು ಧಾರಾವಾಹಿ ನಟರ ವಿರುದ್ಧ ಪ್ರಕರಣ ದಾಖಲಾಗಿದೆ. ಧಾರಾವಾಹಿ ಚಿತ್ರೀಕರಣದ ವೇಳೆ ಕಿರುಕುಳ ನೀಡಿದ್ದಾರೆ ಎಂಬ ನಟಿಯ ದೂರಿನ ಮೇರೆಗೆ ನಟರ ವಿರುದ್ಧ ಪ್ರಕರಣ ದಾಖಲಾಗಿದೆ. ಕೊಚ್ಚಿ ಇನ್ಫೋ ಪಾರ್ಕ್ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಯಲ್ಲಿ ನಟಿಸುತ್ತಿರುವ ಇಬ್ಬರು ನಟರ ವಿರುದ್ಧ ಅದೇ ಧಾರಾವಾಹಿಯ ನಟಿ ದೂರು ದಾಖಲಿಸಿದ್ದಾರೆ. ವಿಶೇಷ ತನಿಖಾ ತಂಡದ ಮುಂದೆ ಹೇಳಿಕೆ ನೀಡಿದ ನಂತರ ನಟಿ ಇನ್ಫೋ ಪಾರ್ಕ್ ಪೋಲೀಸರನ್ನು ಸಂಪರ್ಕಿಸಿದರು. ವಿಶೇಷ ತನಿಖಾ ತಂಡದ ಸೂಚನೆ ಮೇರೆಗೆ ನಟಿ ಪೋಲೀಸರಿಗೆ ದೂರು ನೀಡಿದ್ದಾರೆ.
ಪೋಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಯುವತಿ ಹಿಂಸೆ ಎದುರಿಸಿದ ಧಾರಾವಾಹಿಯಿಂದ ದೂರವಾಗಿದ್ದಾಳೆ. ಧಾರಾವಾಹಿಗೆ ಹೊಸದಾಗಿ ಬಂದ ನಟಿಗೆ ಕೆಟ್ಟ ಅನುಭವವಾಗಿದೆ. ಶೂಟಿಂಗ್ ವೇಳೆ ನಟರು ಅನುಚಿತವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.