ನವದೆಹಲಿ: ಅಂಬೇಡ್ಕರ್ ಕುರಿತಾದ ಹೇಳಿಕೆ ಖಂಡಿಸಿ, ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ವಿಜಯ್ ಚೌಕ್ ಬಳಿ ಇಂಡಿಯಾ ಬಣದ ಸಂಸದರು ಪ್ರತಿಭಟನೆ ನಡೆಸುತ್ತಿದ್ದಾರೆ
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದೆ ಪ್ರಿಯಾಂಕಾ ಗಾಂಧಿ, ಇಂಡಿಯಾ ಬಣದ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ವಿಜಯ್ ಚೌಕದಿಂದ ಸಂಸತ್ ಭವನದವರೆಗೂ ಪ್ರತಿಭಟನಾ ಮೆರವಣಿಗೆಗೆ ಉದ್ದೇಶಿಸಿದ್ದಾರೆ.
ಅಮಿತ್ ಶಾ ಅವರು ಕ್ಷಮೆಯಾಚನೆ ಮಾಡಬೇಕು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ.
'ಬಾಬಾಸಾಹೇಬ್ ಕಾ ಆಪ್ಮಾನ್ ನಹೀ ಸಾಹೇಗಾ ಹಿಂದೂಸ್ತಾನ್' ಎಂಬ ಫಲಕವನ್ನು ಹಿಡಿದುಕೊಂಡಿದ್ದರು.
ಸಂಸದರು 'ಜೈ ಭೀಮ್' 'ಅಮಿತ್ ಶಾ ಮಾಫಿ ಮಾವು' ಮತ್ತು 'ಇಸ್ತಿಫಾ ದೋ' ಎಂಬ ಘೋಷಣೆಗಳನ್ನು ಕೂಗಿದರು.
ಇದೇವೇಳೆ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಿಸಲಾದ ಎಫ್‌ಐಆರ್ ಬಗ್ಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಇದು ಅವರ ಹತಾಶೆಯ ಮಟ್ಟವನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
'ಇಡೀ ದೇಶ ನೋಡುತ್ತಿದೆ. ಅವರು ರಾಹುಲ್ ಗಾಂಧಿ ಮೇಲೆ ಹಲವು ಪ್ರಕರಣಗಳನ್ನು ಹೂಡಿದ್ದಾರೆ. ಅವರು ಹೊಸ ಎಫ್‌ಐಆರ್‌ಗಳನ್ನು ಹಾಕುತ್ತಾರೆ ಮತ್ತು ಸುಳ್ಳು ಹೇಳುತ್ತಾರೆ. ಇದು ಅವರ ಹತಾಶೆಯ ಮಟ್ಟವನ್ನು ತೋರಿಸುತ್ತದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.