ನವದೆಹಲಿ: ದೆಹಲಿ ಮುಖ್ಯಮಂತ್ರಿ ಆತಿಶಿ ಅವರಿಗೆ ಪತ್ರ ಬರೆದಿರುವ ಸಾರಿಗೆ ಆಯುಕ್ತ ಪ್ರಶಾಂತ್ ಗೋಯಲ್ ಅವರು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಗೆ ಸಂಬಂಧಿಸಿ ಆತಿಶಿ ವಿರುದ್ಧ ತನಿಖೆಗೆ ತಯಾರಿ ನಡೆಯುತ್ತಿದೆ ಎಂಬ ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಅವರ ಆರೋಪವನ್ನು ತಳ್ಳಿಹಾಕಿದ್ದಾರೆ.
'ಟೆಲಿವಿಷನ್ ವರದಿ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಕೇಜ್ರಿವಾಲ್ ಮಾಡಿರುವ ಆರೋಪದ ಬಗ್ಗೆ ನನಗೆ ತಿಳಿಯಿತು. ಮುಖ್ಯಮಂತ್ರಿ ವಿರುದ್ಧ ಸಾರಿಗೆ ಇಲಾಖೆಯು ಯಾವುದೇ ತನಿಖೆಗೆ ಮುಂದಾಗಿಲ್ಲ ಎನ್ನುವುದಕ್ಕೆ ದಾಖಲೆಗಳನ್ನು ನೀಡುತ್ತೇನೆ' ಎಂದು ಗೋಯಲ್ ಅವರು ಡಿ.26ರಂದು ಕಳುಹಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.
'ಈ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಕೇಜ್ರಿವಾಲ್ ಅವರ ಆರೋಪದಲ್ಲಿ ಹುರುಳಿಲ್ಲ ಮತ್ತು ಇದು ಜನರನ್ನು ತಪ್ಪು ದಾರಿಗೆ ಎಳೆಯುತ್ತದೆ' ಎಂದು ತಿಳಿಸಿದ್ದಾರೆ.
ಡಿ.25ರಂದು ಸುದ್ದಿಗೋಷ್ಠಿ ನಡೆಸಿದ್ದ ಕೇಜ್ರಿವಾಲ್, 'ಸುಳ್ಳು ಪ್ರಕರಣಗಳಲ್ಲಿ ಆತಿಶಿ ಅವರನ್ನು ಸಿಲುಕಿಸುವಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳ ಮೇಲೆ ಒತ್ತಡ ಹೇರುತ್ತಿದೆ' ಎಂದು ಆರೋಪಿಸಿದ್ದರು.