ನವದೆಹಲಿ: ರಾಮ ಜನ್ಮಭೂಮಿ - ಬಾಬರಿ ಮಸೀದಿ ಪ್ರಕರಣದಲ್ಲಿ 'ಸುಪ್ರೀಂ' 2019ರಲ್ಲಿ ನೀಡಿದ ತೀರ್ಪನ್ನು ಟೀಕಿಸಿರುವ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ಎಫ್. ನರೀಮನ್, ಈ ತೀರ್ಪು 'ನ್ಯಾಯದಾನದ ಬಹುದೊಡ್ಡ ಅಣಕ' ಎಂದು ಹೇಳಿದ್ದಾರೆ. ತೀರ್ಪಿನಲ್ಲಿ ಧರ್ಮನಿರಪೇಕ್ಷ ತತ್ತ್ವಕ್ಕೆ ನ್ಯಾಯ ಸಿಕ್ಕಿಲ್ಲ ಎಂದೂ ಅವರು ಹೇಳಿದ್ದಾರೆ.
ನ್ಯಾಯಮೂರ್ತಿ ಎ.ಎಂ. ಅಹಮದಿ ಸ್ಮಾರಕ ಮೊದಲ ಉಪನ್ಯಾಸ ಕಾರ್ಯಕ್ರಮದಲ್ಲಿ 'ಧರ್ಮನಿರಪೇಕ್ಷತೆ ಮತ್ತು ಭಾರತೀಯ ಸಂವಿಧಾನ' ವಿಷಯದ ಬಗ್ಗೆ ಮಾತನಾಡಿದ ನ್ಯಾಯಮೂರ್ತಿ ನರೀಮನ್ ಅವರು, 2019ರ ತೀರ್ಪು 'ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ 1991' ಅನ್ನು ಎತ್ತಿಹಿಡಿದಿದ್ದುದು ಭರವಸೆಯ ಬೆಳ್ಳಿರೇಖೆಯಂತೆ ಇದೆ ಎಂದರು.
ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದಂತೆ ವಿವಾದಗಳು ದೇಶದ ಎಲ್ಲೆಡೆ ಪ್ರತಿದಿನವೂ ಉದ್ಭವ ಆಗುತ್ತಿವೆ. ಇವುಗಳಿಗೆ ಅಂತ್ಯಕಾಣಿಸಬೇಕು ಎಂದಾದರೆ 'ಪೂಜಾ ಸ್ಥಳಗಳ ಕಾಯ್ದೆ'ಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ಅವರು ಹೇಳಿದರು.
ಮಸೀದಿಯನ್ನು ಧ್ವಂಸಗೊಳಿಸಿದ್ದು ಅಕ್ರಮ ಎಂದು ಘೋಷಿಸಿದ ನಂತರವೂ, ವಿವಾದಿತ ಜಮೀನನ್ನು ಒಂದು ಸಮುದಾಯಕ್ಕೆ ನೀಡಿದ್ದಕ್ಕೆ ಉಲ್ಲೇಖಿಸಿರುವ ಕಾರಣವನ್ನು ಒಪ್ಪಲು ಆಗದು ಎಂದು ನರೀಮನ್ ಹೇಳಿದರು.
ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳೆಲ್ಲರನ್ನೂ ದೋಷಮುಕ್ತಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ - ಸುರೇಂದ್ರ ಯಾದವ್ - ನಿವೃತ್ತಿಯ ನಂತರದಲ್ಲಿ ಉತ್ತರ ಪ್ರದೇಶದ ಉಪ ಲೋಕಾಯುಕ್ತ ಹುದ್ದೆ ಸಿಕ್ಕಿದೆ ಎಂದು ನ್ಯಾಯಮೂರ್ತಿ ನರೀಮನ್ ಹೇಳಿದರು. 'ಈ ದೇಶದಲ್ಲಿನ ವಿದ್ಯಮಾನಗಳು ಹೀಗಿವೆ' ಎಂದು ಅವರು ಹೇಳಿದರು.