ಬದಿಯಡ್ಕ : ಬಳ್ಳಪದವು ನಾರಯಣೀಯಂ ಸಂಗೀತ ಶಾಲೆಯಲ್ಲಿ ನಡೆದ ವೇದ ನಾದ ಯೋಗ ತರಂಗಿಣಿಯ ಸಮಾರೋಪ ಕಾರ್ಯಕ್ರಮದಂಗವಾಗಿ ವೀಣಾವಾದಿನೀ ಪುರಸ್ಕಾರ ಪ್ರಧಾನ ಭಾನುವಾರ ಸಂಜೆ ನಡೆಯಿತು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಗುರುವಾರ ಆರಂಭಗೊಂಡ ವೇದ ನಾದ ಯೋಗ ತರಂಗಿಣಿಯಲ್ಲಿ ಭಾರತದ ಸಮೃದ್ಧ ಸಾಂಸ್ಕøತಿಕ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಂಗೀತ ಸಾಂಸಸ್ಕೃತಿಕ ಭವನ ಬಾಲರಾಮವರಮ್ ಉದ್ಘಾಟನೆಯು ನಡೆಯಿತು.
ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ, ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಖ್ಯಾತ ವಯಲಿನ್ ಕಲಾವಿದ ತಿರುವಿಳ ವಿಜು ಎಸ್. ಆನಂದ್ ಹಾಗೂ ಖ್ಯಾತ ಮೃದಂಗ ಕಲಾವಿದ ಬಾಂಬೆ ಕೆ.ಬಿ.ಗಣೇಶ್ ಅವರಿಗೆ ಗಣ್ಯರ ಸಮ್ಮುಖದಲ್ಲಿ ವೀದಾವಾದೀನಿ ಪುರಸ್ಕಾರ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕಲಾವಿದರನ್ನು ಗೌರವಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿ ಮಾತನಾಡಿ, ಮನುಷ್ಯರನ್ನು ಸರಿಯಾದ ಮನುಷ್ಯರನ್ನಾಗಿಸುವುದೇ ಸಂಗೀತವಾಗಿದೆ. ಇದನ್ನು ಆಸ್ವಾದಿಸದವರು ಯಾರೂ ಇಲ್ಲ. ಇಂತಹ ಒಂದು ಸಂಸ್ಥೆಯು ತನ್ನ ಮುಂದಿನ ತಲೆಮಾರಿಗೆ ಇದರ ಮಹತ್ವವನ್ನು ಸಾರುವ ಕೆಲಸವವಾಗಬೇಕು. ಇಲ್ಲಿ ಸ್ಟುಡಿಯೋ ನಿರ್ಮಾಣಕ್ಕಾಗಿ ಪ್ರತ್ಯೇಕ ಅನುದಾನ ನೀಡುವುದಕ್ಕೆ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಹಿರಿಯ ಮಾರ್ಗದರ್ಶಿಗಳಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಮೂಡಬಿದಿರೆ ಅರಿಹಂತ್ ಇಂಡಸ್ಟ್ರೀಸ್‍ನ ವಿಶ್ವಾಸ್ ಜೈನ್, ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ, ಬ್ರಹ್ಮಶ್ರೀ ರಾಧಾಕೃಷ್ಣ ಭಟ್ ಬಳ್ಳಪದವು, ವೀಣಾವಾದಿನಿ ಸದಸ್ಯ ಹರಿನಾರಾಯಣ ಶಿರಂತ್ತಡ್ಕ ಮತ್ತಿತರರು ಭಾಗವಹಿಸಿದರು. ಆರಂಭದಲ್ಲಿ ಸಂಗೀತ ವಿದ್ವಾನ್ ಯೋಗೀಶ್ ಶರ್ಮಾ ಬಳ್ಳಪದವು ಪ್ರಾಸ್ತಾವಿಸಿ ಸ್ವಾಗತಿಸಿದರು.
ಕಾರ್ಯಕ್ರಮದಂಗವಾಗಿ ಯುವ ಕಲಾಭಾರತಿಯಿಂದ ಕರ್ನಾಟಕ ಶಾಸೀಯ ಸಂಗೀತಕಾರ್ಯಕ್ರಮ ಪ್ರಸ್ತುತಗೊಂಡಿತ್ತು. ಹಾಡುಗಾರಿಕೆಯಲ್ಲಿ ಕುನ್ನಕ್ಕುಡಿ ಬಾಲಮುರಳಿಕೃಷ್ಣ, ವಯಲಿನಲ್ಲಿ ತಿರುವಿಳ ಬಿಜು ಎಸ್.ಆನಂದ್, ಮೃದಂಗದಲ್ಲಿ ಬಾಂಬೆ ಕೆ.ಬಿ.ಗಣೇಶ್, ಘಟಮ್‍ನಲ್ಲಿ ವೆಲ್ಲತ್ತಞರ್ ಶ್ರೀಜಿತ್ ಹಾಗೂ ಖಂಜೀರದಲ್ಲಿ ಉಡುಪಿ ಶ್ರೀಕಾಂತ್ ಭಾಗವಹಿಸಿದ್ದರು.