ಬದಿಯಡ್ಕ: ನಿಸ್ವಾರ್ಥದಿಂದ ದೇವತಾ ಶಕ್ತಿಗಳನ್ನು ಆರಾಧಿಸಿದಾಗ ಆ ಶಕ್ತಿಯು ನಮ್ಮನ್ನು ಉದ್ಧರಿಸುತ್ತದೆ. ಮಹಾದೇವ ಹಾಗೂ ಮಾತೃಶಕ್ತಿಯ ಆರಾಧನೆ ಇಂದು ನಡೆದಿರುವುದು ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಲ್ಲಿ ಮಹತ್ಕಾರ್ಯ. ಕಾಲಕಾಲಕ್ಕೆ ಯಜ್ಞಯಾಗಾದಿಗಳನ್ನು ಮಾಡಿದಾಗ ದೇವರು ಪ್ರಸನ್ನನಾಗುತ್ತಾನೆ. ಧಾರ್ಮಿಕ ವಿಧಿವಿಧಾನಗಳು ನಡೆದಾಗ ಊರಿಗೆ ಶ್ರೇಯಸ್ಸಾಗುವುದಲ್ಲದೆ ಸಮಾಜ ಬಲಿಷ್ಠವಾಗುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ನುಡಿದರು.
ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಭಾನುವಾರ ಜರಗಿದ ಶಿವಶಕ್ತಿ ಮಹಾಯಾಗದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನುಡಿಗಳಲ್ಲಿ ಜಗತ್ತಿಗೆ ಬೆಳಕನ್ನು ನೀಡುವ ಮಹಾದೇವನು ಎತ್ತರದ ಪ್ರದೇಶದಲ್ಲಿ ನೆಲೆನಿಂತು ನಮ್ಮನ್ನೆಲ್ಲ ಪೊರೆಯುತ್ತಾನೆ. ಬ್ರಹ್ಮಕಲಶೋತ್ಸವಕ್ಕೆ ಸಿದ್ಧರಾಗಲು ಭಾವುಕ ಭಕ್ತಿಯಿಂದ ದೇವರನ್ನು ಪೂಜಿಸಬೇಕು. ಶಿವಪಂಚಾಕ್ಷರೀ ಜಪ ಮನೆಮನೆಗಳಲ್ಲಿ ನಿರಂತರ ನಡೆಯಬೇಕು. ಹಿಂದೂಸಮಾಜದ ಮಕ್ಕಳು ಅನಾಹುತಗಳಿಗೆ ಬಲಿಯಾಗದಿರಲು ಅವರನ್ನು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಪ್ರೇರಣೆಯನ್ನು ನೀಡಬೇಕು ಎಂದರು.
ಶಿವಶಕ್ತಿ ಮಹಾಯಾಗ ಸಮಿತಿ ಅಧ್ಯಕ್ಷ ಮಧುಸೂದನ ಆಯರ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶಿವಶಂಕರ ನೆಕ್ರಾಜೆ, ಗಣೇಶ್ ಶೆಟ್ಟಿ ಆದೂರುಗುತ್ತು, ಸೇವಾಸಮಿತಿ ಅಧ್ಯಕ್ಷ ಸೀತಾರಾಮ ರಾವ್ ಪಿಲಿಕೂಡ್ಲು, ಸಿ.ಎಚ್.ವಿಜಯನ್ ನಾಯರ್, ಹರಿಪ್ರಸಾದ್ ವರ್ಮ ಪಾಡಿ, ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ಸ್ವಯಂಸೇವಕ ಸಮಿತಿ ಅಧ್ಯಕ್ಷ ಸಂತೋಷ್ ಚಂದ್ರಂಪಾರೆ, ಆರ್ಥಿಕ ಸಮಿತಿ ಅಧ್ಯಕ್ಷ ಶೇಖರನ್ ನಾಯರ್, ಕೋಶಾಧಿಕಾರಿ ರಾಮಚಂದ್ರ ವೊರ್ಕೋಡ್ಲು, ಉಪಾಧ್ಯಕ್ಷ ಪಿ.ಆರ್.ಗೋಪಾಲನ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಶಿವಶಕ್ತಿ ಮಹಾಯಾಗ ಸಮಿತಿ ಪ್ರಧಾನ ಸಂಚಾಲಕ ಪಿ.ಆರ್. ಸುನಿಲ್ ಸ್ವಾಗತಿಸಿ, ಸಂಚಾಲಕ ರತ್ನಾಕರ ಆಳ್ವ ವಂದಿಸಿದರು. ಕುಶಲ್ ಯಾದವ್ ನೆಕ್ರಾಜೆ ನಿರೂಪಿಸಿದರು.