ನವದೆಹಲಿ: ರಾಜ್ಯಸಭೆಯಲ್ಲಿ ಬಿ.ಆರ್.ಅಂಬೇಡ್ಕರ್ ಕುರಿತ ನನ್ನ ಹೇಳಿಕೆಯನ್ನು ಕಾಂಗ್ರೆಸ್ ತಿರುಚುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ಬುಧವಾರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಅಂಬೇಡ್ಕರ್ ಅವರಿಗೆ ಎಂದಿಗೂ ಅವಮಾನ ಮಾಡದ ಪಕ್ಷದಿಂದ ನಾನು ಬಂದಿದ್ದೇನೆ' ಎಂದು ಹೇಳಿದರು.
'ಸಮಾಜದಲ್ಲಿ ಗೊಂದಲ ಮೂಡಿಸಲು ಮತ್ತು ಜನರ ದಾರಿ ತಪ್ಪಿಸಲು ಕಾಂಗ್ರೆಸ್ ಈ ಹಿಂದೆಯೂ ನನ್ನ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ತಿರುಚಿತ್ತು' ಎಂದು ಕಿಡಿಕಾರಿದರು.
'ಹೀಗಾಗಿದ್ದು ಏಕೆ? ಎನ್‌ಡಿಎ ಸರ್ಕಾರ ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ ಬಗ್ಗೆ ಕೆಲ ಬಿಜೆಪಿ ನಾಯಕರು ಮಾತನಾಡುವುದರ ಜೊತೆಗೆ, ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ವಿರೋಧಿ, ಸಂವಿಧಾನ ವಿರೋಧಿ ಹಾಗೂ ಮೀಸಲಾತಿ ವಿರೋಧಿ ಎನ್ನುವುದನ್ನು ವಾಸ್ತವಾಂಶಗಳೊಂದಿಗೆ ತಿಳಿಸಿದ್ದಕ್ಕೆ ಹೀಗಾಗಿದೆ' ಎಂದು ಹೇಳಿದರು.
'ಯಾವಾಗ ಈ ಸತ್ಯಗಳೆಲ್ಲ ಹೊರಬರಲು ಪ್ರಾರಂಭವಾದವೊ ಆಗ ಕಾಂಗ್ರೆಸ್ ಸತ್ಯವನ್ನು ತಿರುಚಿ ಜನರ ದಾರಿ ತಪ್ಪಿಸುವ ತನ್ನ ಹಳೆಯ ತಂತ್ರವನ್ನು ಉಪಯೋಗಿಸಿದೆ' ಎಂದು ಹೇಳಿದರು.
ಮುಂದುವರಿದು, 'ವಿ.ಡಿ ಸಾರ್ವಕರ್ ಅವರನ್ನು ಅವಮಾನಿಸಿರುವ ಇದೇ ಕಾಂಗ್ರೆಸ್, ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿತ್ತು' ಎಂದು ಕಿಡಿಕಾರಿದರು.
ಇದೆ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜೀನಾಮೆಗೆ ಒತ್ತಾಯಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಶಾ, 'ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂತೋಷವಾಗುವುದಾದರೆ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಆದರೆ, ಇದು ಅವರ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಇನ್ನೂ 15 ವರ್ಷಗಳ ಕಾಲ ಅವರು ಅದೇ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕು' ಎಂದು ಪರೋಕ್ಷವಾಗಿ ಕುಟುಕಿದರು.