ಢಾಕಾ: ಅಗರ್ತಲಾದ ಅಸಿಸ್ಟೆಂಟ್ ಹೈ ಕಮಿಷನ್ ಕಚೇರಿ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಹೈಕಮಿಷನರ್ ಪ್ರಣಯ್ ವರ್ಮಾ ಅವರಿಗೆ ಬಾಂಗ್ಲಾ ಮಧ್ಯಂತರ ಸರ್ಕಾರ ಸಮನ್ಸ್ ನೀಡಿದೆ.
'ವಿದೇಶಾಂಗ ಸಚಿವಾಲಯಕ್ಕೆ ಬರುವಂತೆ ಅವರಿಗೆ (ವರ್ಮಾ) ತಿಳಿಸಲಾಗಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹುಸೇನ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
'ಹಂಗಾಮಿ ವಿದೇಶಾಂಗ ಕಾರ್ಯದರ್ಶಿ ರಿಯಾಜ್ ಹಮೀದುಲ್ಲಾ ಅವರ ಕರೆಯ ಮೇರೆಗೆ ಸಂಜೆ 4 ಗಂಟೆ ಸುಮಾರಿಗೆ ಭಾರತದ ಹೈಕಮಿಷನರ್ ವಿದೇಶಾಂಗ ಸಚಿವಾಲಯವನ್ನು ಪ್ರವೇಶಿಸಿದ್ದಾರೆ' ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ 'ಬಾಂಗ್ಲಾದೇಶ ಸಂಗ್ಬಾದ್ ಸಂಸ್ಥಾ'(ಬಿಎಸ್‌ಎಸ್) ವರದಿ ಮಾಡಿದೆ.
ಬಾಂಗ್ಲಾದಲ್ಲಿ ಹಿಂದೂ ಮುಖಂಡ ಚಿನ್ಮಯಿ ಕೃಷ್ಣದಾಸ್ ಅವರ ಬಂಧನದ ನಂತರ ಭಾರತ ಮತ್ತು ಬಾಂಗ್ಲಾ ಮಧ್ಯೆ ಪರಿಸ್ಥಿತಿ ಮತ್ತಷ್ಟು ವಿಷಮಿಸಿದೆ. ಕೃಷ್ಣದಾಸ್ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹಿಂದೂ ಸಮುದಾಯದವರು ಬಾಂಗ್ಲಾದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.
ಸೋಮವಾರ ಅಸಿಸ್ಟೆಂಟ್ ಹೈ ಕಮಿಷನ್ ಕಚೇರಿ ಆವರಣದೊಳಗೆ ನುಗ್ಗಿದ್ದ ಪ್ರತಿಭಟನಕಾರರು, ಗೇಟ್ ಮುರಿದುಹಾಕಿದ್ದರು. ಧ್ವಜಸ್ತಂಭ ಹಾಳು ಮಾಡಿ, ಬಾಂಗ್ಲಾದೇಶದ ಧ್ವಜವನ್ನು ವಿರೂಪಗೊಳಿಸಿದ್ದರು.