ಮಂಜೇಶ್ವರ : ಈಗಿನ ತಂತ್ರಜ್ಞಾನ ಪ್ರಭಾವಿತ ಸಮಯದಲ್ಲಿ ಬಾಲಕ, ಬಾಲಕಿಯರು ಮೊಬೈಲ್ ನಲ್ಲೇ ನಿರತರಾಗಿರುವಾಗ ಮಂಜೇಶ್ವರ ಉದಯ ಶಾಲೆಯ ವಿದ್ಯಾರ್ಥಿಗಳು ಇದಕ್ಕೆ ಭಿನ್ನವಾಗಿ ತಮ್ಮದೇ ಆದ ವಿನೂತನ ಪ್ರಯತ್ನದೊಂದಿಗೆ ಜಿಲ್ಲೆಯಲ್ಲೇ ಗಮನ ಸೆಳೆದಿದ್ದಾರೆ.
ಇವರು ಹಳೆಯ ಕಾಲದ ಶ್ರವಣ ಮಾಧ್ಯಮದಾದ ರೇಡಿಯೋ ನಿಲಯವನ್ನು ಹೊಸದಾಗಿ ರೂಪಿಸಿಕೊಂಡು ಈ ರೇಡಿಯೋ ನಿಲಯದ ಮೂಲಕ ವಿದ್ಯಾರ್ಥಿಗಳು ತಮ್ಮ ಕಲ್ಪನೆ ಮತ್ತು ಪ್ರತಿಭೆಯನ್ನು ತೋರ್ಪಡಿಸುವಲ್ಲಿ ಯಶಸ್ವಿಯಾಗುತಿದ್ದಾರೆ. ನಿಲಯದಲ್ಲಿ ಹಾಡುಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ಶೈಕ್ಷಣಿಕ ಚರ್ಚೆಗಳು, ಹಾಗು ಸಂದರ್ಶನಗಳನ್ನು ಪ್ರಸಾರ ಮಾಡಲು ಮುಂದಾಗಿದ್ದಾರೆ.
ಜಿಲ್ಲೆಯಲ್ಲೇ ಇದು ವಿದ್ಯಾರ್ಥಿಗಳ ಮೊದಲ ಪ್ರಯತ್ನವಾಗಿದ್ದು ಎಲ್ಲಡೆಗಳಿಂದ ಭಾರೀ ಪ್ರಶಂಶೆ ವ್ಯಕ್ತವಾಗಿದೆ. ರೇಡಿಯೋದಲ್ಲಿ ಕಾರ್ಯಕ್ರಮ ನಿರೂಪಿಸುತಿದ್ದಾರೆ.
ಈ ರೇಡಿಯೋ ಎಫ್‍ಎಂ ಪ್ರಸಾರವನ್ನು ಪೂರ್ಣವಾಗಿ ವಿದ್ಯಾರ್ಥಿಗಳೇ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಾದ ನಫೀಸತ್ ಫಿದಾ ಹಾಗೂ ಮಹ್ಸಿನಾ ನಿರೂಪಕರು, ತಂತ್ರಜ್ಞರು, ಮತ್ತು ವಿಷಯ ನಿರ್ವಹಣೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಮುಖ್ಯ ಉದ್ದೇಶವೆಂದರೆ ಸ್ಥಳೀಯ ಸಂಸ್ಕೃತಿ, ಭಾಷೆ ಮತ್ತು ಪರಂಪರೆಯನ್ನು ಉತ್ತೇಜಿಸಲು, ಮತ್ತು ಸಾರ್ವಜನಿಕರಿಗೆ ಜ್ಞಾನವರ್ಧಕ ಮಾಹಿತಿಯನ್ನು ತಲುಪಿಸಲು ಸಹಾಯ ಮಾಡುವುದು ಇಲ್ಲಿಯ ಅಧ್ಯಾಪಕರುಗಳು ಹಾಗೂ ಪೋಷÀಕರು ಹೇಳುತಿದ್ದಾರೆ.
ಈ ರೇಡಿಯೋ ಯೋಜನೆಯ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಂವಹನ ಕೌಶಲ್ಯ, ಹಾಗೂ ತಂಡದಲ್ಲಿ ಕೆಲಸ ಮಾಡುವ ಗುಣಗಳನ್ನು ವೃದ್ಧಿಸುವುದು. ಆಧುನಿಕ ತಂತ್ರಜ್ಞಾನಕ್ಕೆ ಪರ್ಯಾಯವಾಗಿ, ಹಳೆಯ ಕಾಲದ ರೇಡಿಯೋ ಮಾದರಿಯ ಬಳಕೆ ಮೂಲಕ ಸಮುದಾಯವನ್ನು ಸಂಪರ್ಕಿಸುವ ಉದ್ದೇಶವಿರುವುದಾಗಿ ಇಲ್ಲಿಯ ಶಿಕ್ಷಕರು ಮಾಹಿತಿ ನೀಡಿದ್ದಾರೆ.
ಮಂಜೇಶ್ವರ ಎಸ್ ಎ ಟಿ ಹೈಯರ್ ಸೆಕಂಡರಿ ಶಾಲಾ ಅಧ್ಯಾಪಕ ಹಾಗೂ ಬರಹಗಾರ ಗಣೇಶ್ ಪ್ರಸಾದ್ ನಾಯ್ಕ್ ಬುಧವಾರ ವಿದ್ಯಾರ್ಥಿಗಳಿಂದ ಸಜ್ಜಾದ ರೇಡಿಯೋ ನಿಲಯಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಶಾಲಾ ಪ್ರಾಂಶುಪಾಲ ಜೆರಾಲ್ಡ್ ಐವನ್ ಕ್ರಾಸ್ತಾ, ಕ್ಯಾಂಪಸ್ ನಿರ್ದೇಶಕ ವಂದನೀಯ ಗುರು ಸಂತೋಷ್ ಡಿಸೋಜ ಉಪಸ್ಥಿತರಿದ್ದರು.