ಜೈಪುರ: 'ರೈತರ ಹೆಸರಿನಲ್ಲಿ ದೊಡ್ಡದಾಗಿ ಮಾತನಾಡುವ ಕಾಂಗ್ರೆಸ್, ಅವರಿಗಾಗಿ ಏನು ಮಾಡಿಲ್ಲ. ಇತರರಿಗೆ ಮಾಡಲೂ ಬಿಡುವುದಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.
ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಒಂದು ವರ್ಷ ಪೂರೈಸಿದ್ದು, 'ಒಂದು ವರ್ಷ, ಪರಿಣಾಮ ಉತ್ಕರ್ಷ' ಕಾರ್ಯಕ್ರಮವನ್ನು ಉದ್ಘಾಟಸಿ ಪ್ರಧಾನಿ ಮೋದಿ ಅವರು ಮಾತನಾಡಿದರು.
ಇದೇ ವೇಳೆ ₹46,330 ಕೋಟಿ ಮೌಲ್ಯದ ಇಂಧನ, ರಸ್ತೆ, ರೈಲು ಮತ್ತು ನೀರು ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಿದರು.
'ಪೂರ್ವ ರಾಜಸ್ಥಾನ ಕಾಲುವೆ ಯೋಜನೆ ಬಹಳ ಕಾಲ ವಿಳಂಬವಾಗಲು ಕಾರಣ ಕಾಂಗ್ರೆಸ್ . ಇದು ಕಾಂಗ್ರೆಸ್‌ನ ಉದ್ದೇಶವೇನು ಎಂಬುವುದಕ್ಕೆ ನೇರ ಸಾಕ್ಷಿಯಾಗಿದೆ. ರೈತರ ಹೆಸರಿನಲ್ಲಿ ದೊಡ್ಡದಾಗಿ ಮಾತನಾಡುವ ಅವರು ಅವರಿಗಾಗಿ ಏನು ಮಾಡಿಲ್ಲ' ಎಂದು ಕಿಡಿಕಾರಿದರು.
'ಬಿಜೆಪಿಯ ನೀತಿ ಸಂವಾದವೇ ಹೊರತು ಸಂಘರ್ಷವಲ್ಲ. ಬಿಜೆಪಿಯು ಸಹಕಾರದಲ್ಲಿ ನಂಬಿಕೆ ಇಟ್ಟಿದೆ, ವಿರೋಧದಲ್ಲಿ ಅಲ್ಲ. ನಾವು ಪರಿಹಾರವನ್ನು ಬಯಸುತ್ತೇವೆ ವಿನಃ ಸಮಸ್ಯೆಯನ್ನಲ್ಲ. ಆದ್ದರಿಂದ ನಮ್ಮ ಸರ್ಕಾರವು ಪೂರ್ವ ರಾಜಸ್ಥಾನ ಕಾಲುವೆ ಯೋಜನೆಗೆ ಅನುಮೋದನೆ ನೀಡುವ ಮೂಲಕ ಯೋಜನೆಯನ್ನು ವಿಸ್ತರಿಸಿದ್ದೇವೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ ಪಾರ್ವತಿ-ಕಲಿಸಿಂಧ್-ಚಂಬಲ್ ಯೋಜನೆ ಒಪ್ಪಂದಕ್ಕೆ ತರಲಾಯಿತು' ಎಂದು ಹೇಳಿದರು.
'ನಾನು ಮುಖ್ಯಮಂತ್ರಿಯಾಗಿದ್ದಾಗ ಗುಜರಾತಿನ ವಿವಿಧ ಭಾಗಗಳಿಗೆ ನರ್ಮದಾ ನದಿ ನೀರನ್ನು ಹರಿಸಲು ಬೃಹತ್ ಅಭಿಯಾನವನ್ನು ಹಮ್ಮಿಕೊಂಡಿದೆ. ಇದನ್ನು ತಡೆಯಲು ಕಾಂಗ್ರೆಸ್ ಮತ್ತು ಕೆಲ ಎನ್‌ಜಿಒಗಳು ಹಲವು ತಂತ್ರಗಳನ್ನು ಮಾಡಿದ್ದವು' ಎಂದು ನೆನಪಿಸಿಕೊಂಡರು.
'ನೀರಿನ ಸಮಸ್ಯೆಗೆ ಪರಿಹಾರ ನೀಡಲು ಕಾಂಗ್ರೆಸ್ ಎಂದಿಗೂ ಬಯಸುವುದಿಲ್ಲ. ನಮ್ಮ ನದಿಗಳ ನೀರು ಗಡಿ ದಾಟಿ ಹರಿಯುತ್ತಿದ್ದರು, ಅದರ ಲಾಭ ನಮ್ಮ ರೈತರಿಗೆ ಸಿಕ್ಕಿಲ್ಲ. ನೀರಾವರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದ ಕಾಂಗ್ರೆಸ್, ಎರಡು ರಾಜ್ಯಗಳ ನಡುವೆ ನೀರಿನ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ' ಎಂದು ಹೇಳಿದರು.