ನವದೆಹಲಿ: ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಅಸಹಜ ಲೈಂಗಿಕ ಕ್ರಿಯೆ, ಕ್ರಿಮಿನಲ್ ಬೆದರಿಕೆಯಂತಹ ಆರೋಪಗಳನ್ನು ಈಚಿನ ದಿನಗಳಲ್ಲಿ ವೈವಾಹಿಕ ವ್ಯಾಜ್ಯಗಳ ಜೊತೆ ಬಳಕೆ ಮಾಡಿಕೊಳ್ಳಲಾಗುತ್ತಿದೆ, ಇದನ್ನು ಕೋರ್ಟ್ ಹಲವು ಬಾರಿ ಖಂಡಿಸಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ತಮ್ಮ ಕೈಯಲ್ಲಿರುವ ಕಾನೂನಿನ ಕಠಿಣ ಅಂಶಗಳು ತಮ್ಮ ಪ್ರಯೋಜನಕ್ಕಾಗಿ ಇವೆ; ಅವುಗಳು ಇರುವುದು ಬೆದರಿಸಲು, ಪೀಡಿಸಲು ಅಥವಾ ಪತಿಯಿಂದ ಸುಲಿಗೆ ಮಾಡಲು ಅಲ್ಲ ಎಂಬ ಎಚ್ಚರವು ಮಹಿಳೆಯರಲ್ಲಿ ಇರಬೇಕು ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
ವೈವಾಹಿಕ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸಿದ ಪೀಠವು, ಮಹಿಳೆಗೆ ನೀಡುವ ಜೀವನಾಂಶವು ಹಲವು ಅಂಶಗಳನ್ನು ಆಧರಿಸಿ ಇರುತ್ತದೆ; ಪತಿಯ ವೇತನ ಎಷ್ಟು ಎಂಬಂತಹ ಅಂಶಗಳಷ್ಟನ್ನೇ ಅವಲಂಬಿಸಿರುವುದಿಲ್ಲ ಎಂದು ಹೇಳಿದೆ.
'ಕೆಲವು ಪ್ರಕರಣಗಳಲ್ಲಿ ಪತ್ನಿ ಮತ್ತು ಆಕೆಯ ಕುಟುಂಬದ ಸದಸ್ಯರು ಗಂಭೀರ ಅಪರಾಧಗಳ ಆರೋಪಗಳುಳ್ಳ ಕ್ರಿಮಿನಲ್ ದೂರುಗಳನ್ನು ರಾಜಿ ಮಾತುಕತೆಗೆ ವೇದಿಕೆಯಾಗಿ ಬಳಸಿಕೊಳ್ಳಲು ಹಾಗೂ ತಮ್ಮ ಬೇಡಿಕೆಗಳಿಗೆ ಪತಿ ಮತ್ತು ಆತನ ಕುಟುಂಬದ ಸದಸ್ಯರು ಒಪ್ಪುವಂತೆ ಮಾಡಲು ಅಸ್ತ್ರವಾಗಿ ಬಳಸಿಕೊಳ್ಳುವುದಿದೆ. ಈ ಬೇಡಿಕೆಗಳು ಬಹುತೇಕವಾಗಿ ಹಣದ ರೂಪದಲ್ಲಿರುತ್ತವೆ' ಎಂದು ತೀರ್ಪಿನಲ್ಲಿ ನ್ಯಾಯಮೂರ್ತಿ ನಾಗರತ್ನ ಬರೆದಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಆಕ್ರೋಶದಿಂದ ಈ ರೀತಿ ಮಾಡಲಾಗುತ್ತದೆ, ಇನ್ನು ಕೆಲವು ಸಂದರ್ಭಗಳಲ್ಲಿ ಯೋಜಿತ ಕಾರ್ಯತಂತ್ರವಾಗಿ ಇದನ್ನು ಮಾಡಲಾಗುತ್ತದೆ ಎಂದು ಪೀಠವು ಹೇಳಿದೆ.
'ದುರದೃಷ್ಟದ ಸಂಗತಿ ಎಂದರೆ, ಕಾನೂನಿನ ದುರ್ಬಳಕೆಯಲ್ಲಿ ದೂರುದಾರ-ಆರೋಪಿ ಮಾತ್ರವೇ ಭಾಗಿಯಾಗಿರುವುದಿಲ್ಲ...ಇತರ ಪಾಲುದಾರರು ಕೂಡ ಪರಿಸ್ಥಿತಿಯನ್ನು ಬಿಗಡಾಯಿಸುವ ಕೆಲಸ ಮಾಡುತ್ತಾರೆ. ಅವರು ಮಹಿಳೆಯ ಪಾಲಿಗೆ ಕುಟಿಲ ತಂತ್ರ ರೂಪಿಸಿಕೊಡಬಹುದು' ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.
ತನ್ನ ಎದುರಿಗೆ ಇದ್ದ ಪ್ರಕರಣದಲ್ಲಿ ಪೀಠವು, ಪತಿ-ಪತ್ನಿಗೆ ವಿಚ್ಛೇದನ ನೀಡಿದೆ. ವಿಚ್ಛೇದನ ಪಡೆದ ಇವರಿಬ್ಬರು, 2021ರಲ್ಲಿ ಮದುವೆ ಆಗಿದ್ದರು. ಇವು ಇಬ್ಬರಿಗೂ ಎರಡನೆಯ ಮದುವೆ. ಆದರೆ ಮದುವೆ ಆದ ಕೆಲವೇ ತಿಂಗಳುಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಮೂಡಿತು. ನಂತರ ಪತ್ನಿಯು ಅತ್ಯಾಚಾರ ಹಾಗೂ ಅಸಹಜ ಲೈಂಗಿಕ ಕ್ರಿಯೆಯ ದೂರುಗಳನ್ನು ಪತಿಯ ವಿರುದ್ಧ ಮಾತ್ರವೇ ಅಲ್ಲದೆ, ಎಂಬತ್ತು ವರ್ಷ ವಯಸ್ಸಾಗಿರುವ ತನ್ನ ಮಾವನ (ಪತಿಯ ತಂದೆ) ವಿರುದ್ಧವೂ ನೀಡಿದಳು.
ಅಮೆರಿಕದ ಪ್ರಜೆಯಾಗಿರುವ ಪತಿಯು ದೂರಿನ ಕಾರಣದಿಂದಾಗಿ ಇಲ್ಲಿ ಕೆಲವು ಕಾಲ ಜೈಲು ಪಾಲಾಗಬೇಕಾಯಿತು. ಪತ್ನಿಯು ಸುಪ್ರೀಂ ಕೋರ್ಟ್‌ನಲ್ಲಿ, ವಿಚ್ಛೇದನ ಕೋರಿದ್ದ ಪತಿಯ ಅರ್ಜಿಯನ್ನು ವಿರೋಧಿಸಿದಳು. ಆದರೆ ಜೀವನಾಂಶದ ರೂಪದಲ್ಲಿ ಭಾರಿ ಮೊತ್ತವನ್ನು ಕೋರಿದ್ದಳು.
ತನ್ನ ಪತಿಯ ಆಸ್ತಿಗಳ ಮೌಲ್ಯವು ₹5,000 ಕೋಟಿಯಷ್ಟಿದೆ. ಹೀಗಾಗಿ, ಪತಿಯು ತನ್ನ ಆಸ್ತಿಗಳ ಮೌಲ್ಯಕ್ಕೆ ಸಮನಾದ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ಕೋರಿದ್ದಳು. ಆದರೆ ಈ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ಒಪ್ಪಿಲ್ಲ.
ಈ ಪ್ರಕರಣದಲ್ಲಿ ಪುಣೆಯ ಕೌಟುಂಬಿಕ ನ್ಯಾಯಾಲಯವು ಶಾಶ್ವತ ಜೀವನಾಂಶವಾಗಿ ₹10 ಕೋಟಿ ನೀಡಬೇಕು ಎಂದು ತೀರ್ಮಾನಿಸಿತ್ತು. ಈ ಮೊತ್ತಕ್ಕೆ ಹೆಚ್ಚುವರಿಯಾಗಿ ₹2 ಕೋಟಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.