ನವದೆಹಲಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಹೊಸ ಅಧ್ಯಕ್ಷರ ಆಯ್ಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಬುಧವಾರ ಸಭೆ ನಡೆಸಿತು. ಆಯೋಗದ ಅಧ್ಯಕ್ಷರು ಮತ್ತು ಒಬ್ಬ ಸದಸ್ಯರ ಆಯ್ಕೆ ಕುರಿತು ಸರ್ಕಾರ ಸೂಚಿಸಿದ ಹೆಸರಿಗೆ ವಿರೋಧ ಪಕ್ಷಗಳ ಸದಸ್ಯರ ಅಸಮ್ಮತಿ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಇತ್ತೀಚೆಗಷ್ಟೇ ನಿವೃತ್ತರಾದ ಡಿ.ವೈ.ಚಂದ್ರಚೂಡ್ ಅವರ ಹೆಸರು ಸಭೆಯಲ್ಲಿ ಪ್ರಸ್ತಾಪವಾಗಿತ್ತು ಎಂದು ಮೂಲಗಳು ಹೇಳಿವೆ.
ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿ ಜೂನ್ 1ಕ್ಕೆ ಪೂರ್ಣಗೊಂಡಾಗಿನಿಂದ ಎನ್‌ಎಚ್‌ಆರ್‌ಸಿ ಅಧ್ಯಕ್ಷರ ಹುದ್ದೆ ಖಾಲಿಯಿದೆ. ಆಗಿನಿಂದ ಆಯೋಗದ ಸದಸ್ಯೆ ವಿಜಯ ಭಾರತಿ ಸಯಾನಿ ಪ್ರಭಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಇತರರು ಭಾಗವಹಿಸಿದ್ದರು. ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಅಥವಾ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಬಹುದು. ಆಯ್ಕೆ ಸಮಿತಿ ಶಿಫಾರಸ್ಸು ಆಧರಿಸಿ ರಾಷ್ಟ್ರಪತಿ ಆಯೋಗದ ಅಧ್ಯಕ್ಷರನ್ನು ನೇಮಿಸುವರು.
ಸಭೆಯಲ್ಲಿ ತೆಗೆದುಕೊಂಡು ನಿರ್ಧಾರದ ಕುರಿತು ಪ್ರತಿಕ್ರಿಯಿಸಲು ವಿರೋಧ ಪಕ್ಷದ ನಾಯಕರು ನಿರಾಕರಿಸಿದರು. ಆದರೆ ಅಧ್ಯಕ್ಷರ ಸ್ಥಾನಕ್ಕೆ ಸರ್ಕಾರ ಪ್ರಸ್ತಾಪಿಸಿದ ಹೆಸರಿಗೆ ಅಸಮ್ಮತಿ ಪತ್ರ ಸಲ್ಲಿಸಲು ಅವರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಮಾಜಿ ಸಿಜೆಐಗಳಾದ ಎಚ್.ಎಲ್.ದತ್ತು ಮತ್ತು ಕೆ.ಜಿ.ಬಾಲಕೃಷ್ಣನ್ ಅವರು ಎನ್‌ಎಚ್‌ಆರ್‌ಸಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ.