HEALTH TIPS

ಹಣಕಾಸು ವಂಚಕರ ಬೇಟೆಗೆ ಮ್ಯೂಲ್ ಹಂಟರ್ ಸಜ್ಜು; ಬೆಂಗಳೂರಿನ ಆರ್​ಬಿಐ ಇನ್ನೋವೇಶನ್ ತಂಡ ರೂಪಿಸಿದ ಪ್ರಬಲ ಎಐ ಮಾಡಲ್

ಹಣಕಾಸು ಅಕ್ರಮಗಳನ್ನು ಪತ್ತೆ ಮಾಡಿ ನಿಗ್ರಹಿಸುವ ಸಲುವಾಗಿ ಆರ್​ಬಿಐನ ತಂಡವೊಂದು ಮ್ಯೂಲ್ ಹಂಟರ್ ಎನ್ನುವ ಎಐ ಮಾಡಲ್​ವೊಂದನ್ನು ಅಭಿವೃದ್ಧಿಪಡಿಸಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇಂದು ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸುವಾಗ ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಜಾಲವನ್ನು ಘೋಷಿಸಿದ್ದಾರೆ. ಅಕ್ರಮ ಹಣಕಾಸು ವಹಿವಾಟುಗಳಿಗೆ ಬಳಕೆಯಾಗುವ ಕಳ್ಳ ಬ್ಯಾಂಕ್ ಖಾತೆಗಳು ಅಥವಾ ಮ್ಯೂಲ್ ಅಕೌಂಟ್​ಗಳನ್ನು ನಿಗ್ರಹಿಸಲು ಎಐ ಮಾಡಲ್ ಅನ್ನು ರೂಪಿಸಲಾಗಿದೆ ಎಂದು ಆರ್​ಬಿಐ ಗವರ್ನರ್ ತಿಳಿಸಿದರು.

ಬೆಂಗಳೂರಿನಲ್ಲಿರುವ ಆರ್​ಬಿಐನ ಇನ್ನೋವೇಶನ್ ಹಬ್​ನಲ್ಲಿ ಈ ಎಐ ಮಾಡಲ್ ಅಭಿವೃದ್ಧಿಪಡಿಸಲಾಗಿದೆ. ಆರ್ಟಿಫಿಯಲ್ ಇಂಟೆಲಿಜೆನ್ಸ್ ಅಥವಾ ಮೆಷೀನ್ ಲರ್ನಿಂಗ್ ತಂತ್ರಜ್ಞಾನ ಬಳಸಿ ರೂಪಿಸಲಾಗಿರುವ ಈ ಟೂಲ್ ಮ್ಯೂಲ್ ಅಕೌಂಟ್​ಗಳನ್ನು ಪತ್ತೆ ಮಾಡುವ ಚಾಕಚಕ್ಯತೆ ಹೊಂದಿದೆ ಎನ್ನಲಾಗುತ್ತಿದೆ. ಈ ಮ್ಯೂಲ್ ಅಕೌಂಟ್​ಗಳಿಂದಾಗಿ ಹಣಕಾಸು ಅಕ್ರಮ, ತೆರಿಗೆ ವಂಚನೆ ಇತ್ಯಾದಿ ಹೆಚ್ಚುತ್ತಿದೆ. ಮ್ಯೂಲ್ ಹಂಟರ್ ಎಐ ಮಾಡಲ್ ಹೇಗೆ ಈ ಅಕ್ರಮ ತಡೆಯಬಲ್ಲುದು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬಹುದು.

ಏನಿದು ಮ್ಯೂಲ್ ಅಕೌಂಟ್?

ದೊಡ್ಡ ಮೊತ್ತದ ಅಕ್ರಮ ಹಣ ವರ್ಗಾವಣೆ ಮಾಡಬೇಕೆಂದಿರುವ ಆರ್ಥಿಕ ಅಪರಾಧಿಗಳು ಯಾವುದಾದರೂ ಡಮ್ಮಿ ಅಕೌಂಟ್ ಅಥವಾ ಯಾರದ್ದಾದರೂ ಬ್ಯಾಂಕ್ ಖಾತೆ ಮೂಲಕ ಅದನ್ನು ಕಳುಹಿಸಬಹುದು. ಅಂಥ ಅಕೌಂಟ್ ಅನ್ನು ಮ್ಯೂಲ್ ಅಕೌಂಟ್ ಎನ್ನುತ್ತಾರೆ. ಇಲ್ಲಿ ಮ್ಯೂಲ್ ಅಕೌಂಟ್​ದಾರರು ಈ ಆರ್ಥಿಕ ಅಪರಾಧದಲ್ಲಿ ಸ್ವಯಿಚ್ಛೆಯಿಂದ ಪಾಲ್ಗೊಂಡಿರಬಹುದು ಅಥವಾ ಸ್ವಲ್ಪ ಹಣದ ಆಸೆಯಿಂದಲೂ ಪಾಲ್ಗೊಂಡಿರಬಹುದು. ಆದರೆ, ಅಕ್ರಮ ಹಣಕಾಸು ವರ್ಗಾವಣೆಯಲ್ಲಿ ಯಾರೇ ಭಾಗಿಯಾದರೂ ಅದು ಆರ್ಥಿಕ ಅಪರಾಧವೆಂದು ಪರಿಗಣಿತವಾಗುತ್ತದೆ.

ದೇಶದಲ್ಲಿ ದಾಖಲಾಗಿರುವ ಸೈಬರ್ ಕ್ರೈಮ್ ಪ್ರಕರಣಗಳಲ್ಲಿ ಶೇ. 67ಕ್ಕಿಂತಲೂ ಹೆಚ್ಚಿನ ಪಾಲು ಆನ್​ಲೈನ್ ಹಣಕಾಸು ವಂಚನೆಗಳೇ ಆಗಿವೆ. ಈ ವಂಚನೆ ಪ್ರಕರಣಗಳನ್ನು ಭೇದಿಸಲು ಮ್ಯೂಲ್ ಅಕೌಂಟ್​ಗಳೇ ಒಂದು ರೀತಿಯಲ್ಲಿ ತಡೆಗೋಡೆಯಂತಿರುತ್ತವೆ. ಅನೇಕ ದೊಡ್ಡ ಆರ್ಥಿಕ ಅಪರಾಧಿಗಳ ಹಣಕಾಸು ಜಾಡು ಹಿಡಿಯಲು ಯತ್ನಿಸುವಾಗ ಈ ಮ್ಯೂಲ್ ಅಕೌಂಟ್​ಗಳಿಂದಾಗಿ ಆ ಜಾಡು ಕಣ್ತಪ್ಪಬಹುದು. ರಿಸರ್ವ್ ಬ್ಯಾಂಕ್ ರೂಪಿಸಿರುವ ಮ್ಯೂಲ್ ಹಂಟರ್ ಡಾಟ್ ಎಐ ಸಾಧನವು ಇಂಥ ಕೊಂಡಿ ಅಕೌಂಟ್​ಗಳನ್ನ ಪತ್ತೆ ಮಾಡುವ ಉದ್ದೇಶ ಹೊಂದಿರುತ್ತದೆ.

ಆರ್​ಬಿಐ ಬಳಿ ಇಂಥ ಕಳ್ಳ ಅಕೌಂಟ್​ಗಳನ್ನು ಪತ್ತೆ ಮಾಡಲು ಸಾಂಪ್ರದಾಯಿಕ ವಿಧಾನಗಳಿವೆ. ಆದರೆ, ಅವುಗಳ ಪರಿಣಾಮ ಸೀಮಿತ ಮಟ್ಟದಲ್ಲಿ ಮಾತ್ರವೇ ಇರುತ್ತದೆ. ಎಐ ಆಧಾರಿತ ಟೂಲ್​ಗಳು ಸಂಕೀರ್ಣ ಅಲ್ಗಾರಿದಂಗಳನ್ನು ಬಳಸಿ ಬೃಹತ್ ವಹಿವಾಟು ದತ್ತಾಂಶಗಳನ್ನು ಜಾಲಾಡಿ ವಂಚಕ ಖಾತೆಗಳ ಜಾಡು ಹಿಡಿಯಲು ಪರಿಣಾಮಕಾರಿ ಎನಿಸುವ ನಿರೀಕ್ಷೆ ಇದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries