ಮುಂಬೈ: ಇವಿಎಂ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಶನಿವಾರ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ್ದ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟದ ಸದಸ್ಯರು ಇಂದು(ಭಾನುವಾರ) ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇತ್ತೀಚೆಗಷ್ಟೇ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಅಭೂತಪೂರ್ವ ಗೆಲವು ಸಾಧಿಸಿತ್ತು.
ಚುನಾವಣೆ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ವಿರೋಧ ಪಕ್ಷಗಳ ಒಕ್ಕೂಟ ಮಹಾ ವಿಕಾಸ್ ಆಘಾಡಿ(ಎಂವಿಎ) ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಿತ್ತು. ಅಲ್ಲದೇ ಶನಿವಾರ ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸಿತ್ತು.
ಭಾನುವಾರ ಕಾಂಗ್ರೆಸ್‌ನ ನಾನಾ ಪಟೋಲೆ, ವಿಜಯ್ ವಾಡೆತ್ತಿವಾರ್ ಮತ್ತು ಅಮಿತ್ ದೇಶಮುಖ್, ಎನ್‌ಸಿಪಿಯ(ಎಸ್‌ಪಿ) ಜಿತೇಂದ್ರ ಅವ್ಹಾದ್ ಮತ್ತು ಶಿವಸೇನಾ(ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಸೇರಿದಂತೆ ಹಲವು ನಾಯಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.