ಗುವಾಹಟಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅಂತ್ಯಸಂಸ್ಕಾರ ವಿಷಯದಲ್ಲೂ ಕಾಂಗ್ರೆಸ್ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ನೋವು ಉಂಟುಮಾಡಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ಹೇಳಿದ್ದಾರೆ.
'ಸಿಂಗ್ ಅವರ ಸ್ಮರಣಾರ್ಥ ಸ್ಮಾರಕ ನಿರ್ಮಾಣ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದರೂ, ಅಂತಿಮ ಯಾತ್ರೆಯ ಸುತ್ತ ವಿವಾದವನ್ನು ಹುಟ್ಟುಹಾಕಲು ಕಾಂಗ್ರೆಸ್ ಯತ್ನಿಸುತ್ತಿದೆ' ಎಂದು ಶರ್ಮಾ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಫೋಸ್ಟ್ ಮಾಡಿದ್ದಾರೆ.
'ಕಾಂಗ್ರೆಸ್ ಇಂತಹ ನಿರ್ಲಕ್ಷ್ಯ ತೋರುತ್ತಿರುವುದು ಇದೇ ಮೊದಲೇನೂ ಅಲ್ಲ. ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ವಿಷಯದಲ್ಲೂ ಹೀಗೆಯೇ ನಡೆದುಕೊಂಡಿದೆ. ದುರದೃಷ್ಟವಶಾತ್ ಪಕ್ಷವು ತಮ್ಮವರನ್ನೇ ಅಸಡ್ಡೆಯಿಂದ ಕಾಣುತ್ತಿದೆ' ಎಂದು ಆರೋಪಿಸಿದ್ದಾರೆ.
ಸ್ಮಾರಕ ಮಾಡುವ ಜಾಗದಲ್ಲೇ ಸಿಂಗ್ ಅವರ ಅಂತ್ಯಸಂಸ್ಕಾರ ನೆರವೇರಿಸುವ ಬದಲು ನಿಗಮ್‌ಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅವರಿಗೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಜಘಾಟ್‌ನಲ್ಲಿ ಸ್ಮಾರಕ: ರಾಷ್ಟ್ರಪತಿಗೆ ಸಿಧು ಪತ್ರ
ಚಂಡೀಗಢ: ನವದೆಹಲಿಯ ರಾಜಘಾಟ್ ಸಂಕೀರ್ಣದಲ್ಲಿ ಮನಮೋಹನ ಸಿಂಗ್ ಅವರ ಸ್ಮಾರಕಕ್ಕೆ ಸ್ಥಳ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಪತ್ರ ಬರೆದಿದ್ದಾರೆ. 'ಪ್ರಜಾಪ್ರಭುತ್ವಕ್ಕೆ ಕೊಡುಗೆ ಸಲ್ಲಿಸಿದವರ ವಿಷಯದಲ್ಲಿ ರಾಜಕೀಯ ಸಲ್ಲದು. ಮನಮೋಹನ ಸಿಂಗ್ ಅವರಿಗೆ ಸಲ್ಲಬೇಕಾದ ಗೌರವ ದಕ್ಕಲಿ' ಎಂಬ ಒಕ್ಕಣೆಯೊಂದಿಗೆ ಅವರು ರಾಷ್ಟ್ರಪತಿಯವರಿಗೆ ಬರೆದಿರುವ ಪತ್ರವನ್ನು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.