ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬಡ್ಸ್ ಶಾಲಾ ಕಲೋತ್ಸವದಲ್ಲಿ ನೀಲೇಶ್ವರ ಪ್ರತ್ಯಾಶಾ ಬಡ್ಸ್ ಶಾಲೆಯು ಸತತ ಎರಡನೇ ವರ್ಷ 47 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಪುಲ್ಲೂರು ಪೆರಿಯ ಮಹಾತ್ಮಾ ಬಡ್ಸ್ ಶಾಲೆ ದ್ವಿತೀಯ ಸ್ಥಾನ ಹಾಗೂ ಮುಳಿಯಾರ್ ತಣಲ್ ಬಡ್ಸ್ ಶಾಲೆ ತೃತೀಯ ಸ್ಥಾನ ಪಡೆದುಕೊಂಡಿತು. ಪಡನ್ನಕ್ಕಾಡ್ ನೆಹರು ಕಾಲೇಜಿನಲ್ಲಿ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಯ 15 ಬಡ್ಸ್ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನೀಲೇಶ್ವರ ನಗರಸಭಾ ಉಪಾಧ್ಯಕ್ಷ ಮುಹಮ್ಮದ್ ರಫಿ ಅವರಿಂದ ಬಡ್ಸ್ ಶಾಲೆಯ ವಿದ್ಯಾರ್ಥಿಗಳು, ಅವರ ಪೋಷಕರು ಹಾಗೂ ಸಿಬ್ಬಂದಿ ಟ್ರೋಫಿ ಸ್ವೀಕರಿಸಿದರು.