ಡಮಾಸ್ಕಸ್: ಬಂಡುಕೋರರ ದಿಢೀರ್ ದಾಳಿ ಹಿನ್ನೆಲೆ ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ದೇಶ ತೊರೆಯುತ್ತಿದ್ದಂತೆ ಸಿರಿಯಾದಲ್ಲಿ ಅರಾಜಕತೆ ತಾಂಡವವಾಡುತ್ತಿದೆ.
ಸಿರಿಯಾ ಅಧ್ಯಕ್ಷರ ಮನೆಗೆ ನುಗ್ಗಿರುವ ನೂರಾರು ಮಂದಿ ಕೊಠಡಿಯಿಂದ ಕೊಠಡಿಗೆ ಓಡಾಡುತ್ತಾ, ಫೋಟೊಗಳಿಗೆ ಪೋಸ್ ಕೊಡುತ್ತಾ, ಪೀಠೋಪಕರಣ ಮತ್ತು ಆಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಎತ್ತಿಕೊಂಡು ಓಡುತ್ತಿರುವ ದೃಶ್ಯ ವಿಡಿಯೊದಲ್ಲಿ ಕಂಡುಬಂದಿದೆ.
ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ದೊರೆತಿರುವ ವಿಡಿಯೊದಲ್ಲಿ ಭಾನುವಾರ ಜನರು ಅಧ್ಯಕ್ಷರ ಅರಮನೆಗೆ ನುಗ್ಗಿರುವುದು ಕಂಡುಬಂದಿದೆ. ವೈಭವದ ಅರಮನೆಯಲ್ಲಿ ಮಕ್ಕಳು ಕೊಠಡಿಯಿಂದ ಕೊಠಡಿಗೆ ಓಡಾಡುತ್ತಿದ್ದರೆ, ಜನರು ಪೀಠೋಪಕರಣಗಳನ್ನು ಹೆಗಲ ಮೇಲೆ ಇಟ್ಟುಕೊಂಡು ಹೊತ್ತೊಯ್ಯುತ್ತಿದ್ದಾರೆ. ಕಪಾಟುಗಳಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ನೆಲದ ಮೇಲೆ ಚೆಲ್ಲಿ, ಬೆಲೆಬಾಳುವ ಆಭರಣ ಮತ್ತು ದುಬಾರಿ ವಸ್ತುಗಳಿಗೆ ಶೋಧ ನಡೆಸುತ್ತಿರುವುದು ಕಂಡುಬಂದಿದೆ.
ಅಧ್ಯಕ್ಷರ ಮತ್ತೊಂದು ಅರಮನೆಗೆ ನುಗ್ಗಿರುವ ಮಹಿಳೆಯರು ಮತ್ತು ಪುರುಷರನ್ನೊಳಗೊಂಡ ಮತ್ತೊಂದು ಗುಂಪು, ಸಿಕ್ಕ ಸಿಕ್ಕ ವಸ್ತುಗಳು, ಅಲಂಕಾರಿಕ ಹೂಕುಂಡಗಳನ್ನು ಹೊತ್ತೊಯ್ದಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ತಲ್ಲಣ ಸೃಷ್ಟಿಸಿದ್ದ ಸಿರಿಯಾದ 13 ವರ್ಷಗಳ ಬಂಡುಕೋರರ ನಾಗರಿಕ ಯುದ್ಧ ಒಂದು ಹಳತ ತಲುಪಿದ್ದು, ಕೊನೆಗೂ ಬಂಡುಕೋರರು ರಾಜಧಾನಿ ಡೆಮಾಸ್ಕಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಅಧ್ಯಕ್ಷ ಬಷರ್ ಒತ್ತಾಯಪೂರ್ವಕವಾಗಿ ದೆಶ ತೊರೆದಿದ್ದಾರೆ.
ಬಂಡುಕೋರರು ದಿಢೀರನೆ ದಾಳಿ ನಡೆಸಿರುವ ಹಿನ್ನೆಲೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡದ ಅಧ್ಯಕ್ಷ ಬಷರ್, ಭಾನುವಾರ ಡಮಾಸ್ಕಸ್ ತೊರೆದು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.