ಚೆನ್ನೈ: ಭಕ್ತನೊಬ್ಬ ಇಲ್ಲಿನ ದೇವಸ್ಥಾನವೊಂದರ ಹುಂಡಿಗೆ ಆಕಸ್ಮಿಕವಾಗಿ ತನ್ನ ಐಫೋನ್ ಬೀಳಿಸಿಕೊಂಡಿದ್ದು, ಈಗ ಅದು ಆತನಿಗೆ ಮರಳಿ ಸಿಗದಂತಾಗಿದೆ. ಭಕ್ತ ಐಫೋನ್ ಮರಳಿಸುವಂತೆ ಇಟ್ಟಿರುವ ಕೋರಿಕೆಯನ್ನು ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ನಯವಾಗಿ ತಿರಸ್ಕರಿಸಿದೆ.
ಅದು ಈಗ ದೇವಾಲಯದ ಸ್ವತ್ತು ಎಂದು ಪ್ರತಿಪಾದಿಸಿದೆ.
ಅಂದಹಾಗೆ, ಈ ಘಟನೆ ನಡೆದಿರುವುದು ಚೆನ್ನೈ ಸಮೀಪದ ತಿರುಪೋರೂರಿನ ಅರುಲ್ಮಿಗು ಕಂದಸ್ವಾಮಿ ದೇವಸ್ಥಾನದಲ್ಲಿ.
ಕುಟುಂಬದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಭಕ್ತ ದಿನೇಶ್ ಎಂಬಾತ, ದೇವರ ಹುಂಡಿಗೆ ಕಾಣಿಕೆ ಅರ್ಪಿಸಲು ಅಂಗಿಯ ಜೇಬಿನಿಂದ ಹಣ ತೆಗೆದಾಗ ಐಫೋನ್ ಕೂಡ ಆಕಸ್ಮಿಕವಾಗಿ ಜಾರಿ ಹುಂಡಿಯೊಳಗೆ ಬಿದ್ದಿದೆ. ತಕ್ಷಣ ಎಚ್ಚೆತ್ತುಕೊಂಡ ದಿನೇಶ್, ದೇವಸ್ಥಾನದ ಅಧಿಕಾರಿಗಳನ್ನು ಸಂಪರ್ಕಿಸಿ, ಮೊಬೈಲ್ ಹಿಂದಿರುಗಿಸುವಂತೆ ಕೋರಿಕೊಂಡಿದ್ದಾನೆ. ಆಡಳಿತ ಮಂಡಳಿಯವರು ಶುಕ್ರವಾರ ಹುಂಡಿ ತೆರೆದಾಗ ಮೊಬೈಲ್ ಪತ್ತೆಯಾಗಿದೆ. ಆದರೆ, ಮೊಬೈಲ್ ಈಗ ದೇವರಿಗೆ ಅರ್ಪಿಸಿರುವ ಕಾಣಿಕೆಯಾಗಿರುವುದರಿಂದ ಮೊಬೈಲ್ ಹಿಂದಿರುಗಿಸಲಾಗದು. ಮೊಬೈಲ್‌ನಲ್ಲಿರುವ ದತ್ತಾಂಶ ಮತ್ತು ಸಿಮ್ ಕಾರ್ಡ್ ಮಾತ್ರ ಹಿಂಪಡೆಯಬಹುದು ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ಒಪ್ಪದ ದಿನೇಶ್, ಮೊಬೈಲ್ ಫೋನ್ ಹಿಂತಿರುಗಿಸುವಂತೆ ಒತ್ತಾಯಿಸಿದ್ದಾರೆ.
ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಪ್ರತಿಕ್ರಿಯಿಸಿರುವ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವ ಪಿ.ಕೆ. ಶೇಖರ್ ಬಾಬು, 'ದೇವರ ಹುಂಡಿಗೆ ಹಾಕಿದ ಯಾವುದೇ ವಸ್ತು ದೇವರಿಗೆ ಸೇರಿದ್ದಾಗಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.
'ದೇವಾಲಯಗಳಲ್ಲಿನ ಆಚರಣೆಗಳು ಮತ್ತು ಸಂಪ್ರದಾಯಗಳ ಪ್ರಕಾರ, ಹುಂಡಿಯಲ್ಲಿ ಅರ್ಪಿಸಿದ ಯಾವುದೇ ಕಾಣಿಕೆಯು ನೇರವಾಗಿ ಆ ದೇವಾಲಯದ ದೇವರ ಖಾತೆಗೆ ಸಲ್ಲುತ್ತದೆ. ಭಕ್ತರಿಗೆ ಕಾಣಿಕೆಯನ್ನು ವಾಪಸ್ ನೀಡಲು ಆಡಳಿತ ಮಂಡಳಿಗೆ ನಿಯಮಗಳಲ್ಲಿ ಅವಕಾಶವಿಲ್ಲ' ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
'ಭಕ್ತನಿಗೆ ಪರಿಹಾರ ನೀಡಲು ಸಾಧ್ಯವೇ ಅಥವಾ ಇಲ್ಲವೇ ಎಂಬುದನ್ನು ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು' ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಪಳನಿಯ ಶ್ರೀ ಧಂಡಾಯುದಪಾಣಿ ಸ್ವಾಮಿ ದೇಗುಲದಲ್ಲಿ 2023ರ ಮೇನಲ್ಲಿ ಭಕ್ತೆ ಎಸ್. ಸಂಗೀತ ಎಂಬವರು ತಮ್ಮ ಚಿನ್ನದ ಸರವನ್ನು ಆಕಸ್ಮಿಕವಾಗಿ ಹುಂಡಿಗೆ ಬೀಳಿಸಿಕೊಂಡಿದ್ದರು. ಅವರು ದೇವರಿಗೆ ನೈವೇದ್ಯ ಮಾಡಲು, ಕೊರಳಿನಲ್ಲಿದ್ದ ತುಳಸಿ ಮಾಲೆ ತೆಗೆದಾಗ ಚಿನ್ನದ ಸರ ಜಾರಿ ಹುಂಡಿಗೆ ಬಿದ್ದಿತ್ತು. ಇದನ್ನು ಸಿಸಿಟಿವಿ ದೃಶ್ಯಾವಳಿಗಳಿಂದ ಖಚಿತಪಡಿಸಿಕೊಂಡ ನಂತರ, ಆಕೆಯ ಆರ್ಥಿಕ ಪರಿಸ್ಥಿತಿ ಪರಿಗಣಿಸಿ, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ತಮ್ಮ ಸ್ವಂತ ವೆಚ್ಚದಲ್ಲಿ ಅಷ್ಟೇ ಮೌಲ್ಯದ ಹೊಸ ಚಿನ್ನದ ಸರ ಖರೀದಿಸಿ ನೀಡಿದ್ದರು ಎಂದು ಧಾರ್ಮಿಕ ದತ್ತಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
1975 ರ ಹುಂಡಿ ನಿಯಮಗಳು, ಸುರಕ್ಷತೆ ಮತ್ತು ಲೆಕ್ಕಪತ್ರದ ಪ್ರಕಾರ, ದೇವಾಲಯಕ್ಕೆ ಸೇರಿದ ಯಾವುದೇ ಕಾಣಿಕೆಗಳನ್ನು ಯಾವುದೇ ಸಮಯದಲ್ಲಿ ಅದನ್ನು ಅರ್ಪಿಸಿದವರಿಗೆ ಹಿಂತಿರುಗಿಸಲು ಅವಕಾಶವಿಲ್ಲ ಎಂದು ಅಧಿಕಾರಿ ವಿವರಿಸಿದರು.