ಕೊಲ್ಕತ್ತ : ಭಾರತದ ಪಶ್ಚಿಮ ಬಂಗಾಳ, ಬಿಹಾರ ಹಾಗೂ ಒಡಿಶಾ ರಾಜ್ಯಗಳ ಮೇಲೆ ಬಾಂಗ್ಲಾದೇಶಕ್ಕೆ ಹಕ್ಕಿದೆ ಎಂದು ಅಲ್ಲಿನ ಕೆಲವು ರಾಜಕಾರಣಿಗಳು ನೀಡಿರುವ ಹೇಳಿಕೆಯನ್ನು ಟೀಕಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 'ಬಾಹ್ಯ ಶಕ್ತಿಗಳು ಭಾರತದ ನೆಲವನ್ನು ಆಕ್ರಮಿಸಿಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ಭಾರತೀಯರೇನು 'ಲಾಲಿಪಾಪ್' ತಿನ್ನುತ್ತಿರುತ್ತಾರೆಯೇ?'
ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷವು (ಬಿಎನ್‌ಪಿ) ಇತ್ತೀಚೆಗೆ ಢಾಕಾದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ, 'ದೇಶವು ಭಾರತದ ಬಿಹಾರ, ಒಡಿಶಾ ಹಾಗೂ ಪಶ್ಚಿಮ ಬಂಗಾಳಗಳ ಮೇಲೆ ನ್ಯಾಯಸಮ್ಮತವಾದ ಹಕ್ಕು ಹೊಂದಿದೆ' ಎಂದು ಹೇಳಿತ್ತು.
ವಿಧಾನಸಭೆಯಲ್ಲಿ ಮಾತನಾಡಿದ ಮಮತಾ, 'ಬಾಂಗ್ಲಾದೇಶದಲ್ಲಿ ನೀಡಲಾಗಿರುವ ಹೇಳಿಕೆಗಳ ಕುರಿತು ರಾಜ್ಯದ ಜನರು ಪ್ರಚೋದಿತರಾಗಕೂಡದು. ಶಾಂತಿಯನ್ನು ಕಾಪಾಡಿ. ಕೇಂದ್ರದ ಯಾವುದೇ ನಿರ್ಧಾರಕ್ಕೆ ಪಶ್ಚಿಮ ಬಂಗಾಳ ಬದ್ಧವಾಗಿರುತ್ತದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಯನ್ನು ನಮ್ಮ ರಾಜ್ಯದಲ್ಲಿ ಇಮಾಮರು ಕೂಡ ಖಂಡಿಸಿದ್ದಾರೆ' ಎಂದು ಹೇಳಿದರು.