ನ್ಯೂಯಾರ್ಕ್: ಹೊಸತನ್ನು ಪರೀಕ್ಷಿಸಲು ಭಾರತ ಒಂದು ಉತ್ತಮ ಪ್ರಯೋಗಶಾಲೆ ಎಂದ ಮೈಕ್ರೊಸಾಫ್ಟ್‌ನ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಲಿಂಕ್‌ಡಿನ್ ಸಹ ಸಂಸ್ಥಾಪಕ ರೀಡ್ ಹಾಫ್‌ಮನ್ ಅವರೊಂದಿಗೆ ನಡೆಸಿದ ಪಾಡ್‌ಕಾಸ್ಟ್ ಸಂವಾದದಲ್ಲಿ ಮಾತನಾಡಿದ ಗೇಟ್ಸ್, 'ಭಾರತದಲ್ಲಿ ಸಾಕಷ್ಟು ಸಂಗತಿಗಳಿದ್ದು, ಹಲವು ಸಂಕಷ್ಟಗಳೂ ಇವೆ.
ಗೇಟ್ಸ್ ಅವರ ಈ ಅಭಿಪ್ರಾಯಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. '2009ರಲ್ಲಿ ಕ್ಲಿನಿಕಲ್ ಟ್ರಯಲ್ ಹೆಸರಿನಲ್ಲಿ ಬಿಲ್ ಹಾಗೂ ಮಿಲಿಂಡಾ ಗೇಟ್ಸ್ ಪ್ರತಿಷ್ಠಾನವು ಭಾರತದ ಆದಿವಾಸಿಗಳ ಮೇಲೆ ನಡೆಸಿದ ಪ್ರಯೋಗದ ಪರಿಣಾಮ ಏಳು ಶಾಲಾ ಬಾಲಕಿಯರು ಮೃತಪಟ್ಟಿದ್ದರು. ಹಲವರು ತೀವ್ರವಾಗಿ ಅಸ್ವಸ್ಥರಾಗಿದ್ದರು' ಎಂಬುದನ್ನು ಉಲ್ಲೇಖಿಸಿದ್ದಾರೆ.
'ದಿ ಸ್ಕಿನ್ ಡಾಕ್ಟರ್' ಎಂಬ ಖಾತೆ ಹೊಂದಿರುವ ಸ್ಕಾಟ್‌ಲೆಂಡ್‌ನ ವೈದ್ಯರೊಬ್ಬರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಗೇಟ್ಸ್ ಅವರ ಹೇಳಿಕೆಯನ್ನು ಖಂಡಿಸಿ, ಭಾರತದಲ್ಲಿ ನಡೆದ ಕರಾಳ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಆರೋಗ್ಯ ಕ್ಷೇತ್ರದ ತಂತ್ರಜ್ಞಾನದಲ್ಲಿ ನಿಖರ ಕಾರ್ಯಕ್ರಮ (ಪಾಥ್) ಯೋಜನೆಯಡಿ ನಡೆಸಿದ ಕ್ಲಿನಿಕಲ್ ಟ್ರಯಲ್ಸ್ ನಡೆಸಿದ ಸ್ವಯಂ ಸೇವಾ ಸಂಸ್ಥೆಗೆ ಗೇಟ್ಸ್ ಪ್ರತಿಷ್ಠಾನವು ದೇಣಿಗೆ ನೀಡಿತ್ತು. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್) ಸಹಯೋಗದಲ್ಲಿ ಪಾಥ್ ನಡೆಸಿದ ಕ್ಲಿನಿಕಲ್ ಟ್ರಯಲ್ಸ್‌ನಲ್ಲಿ ಗರ್ಭಕೊರಳಿನ ಕ್ಯಾನ್ಸರ್ ತಡೆಗಟ್ಟಲು ಅಭಿವೃದ್ಧಿಪಡಿಸಿದ್ದ ಲಸಿಕೆಯನ್ನು ತೆಲಂಗಾಣ ಹಾಗೂ ಗುಜರಾತ್‌ನ ವಡೋದರಾದ 14 ಸಾವಿರ ಆದಿವಾಸಿ ಶಾಲಾ ಬಾಲಕಿಯರಿಗೆ ನೀಡಲಾಗಿತ್ತು.
ಇದರಲ್ಲಿ ಪಾಲ್ಗೊಂಡಿದ್ದ ಕೆಲ ಬಾಲಕಿಯರಲ್ಲಿ ಲಸಿಕೆ ತನ್ನ ಅಡ್ಡಪರಿಣಾಮ ಬೀರಿತ್ತು. ಲಸಿಕೆ ಪಡೆದ ಬಹಳಷ್ಟು ಜನ ಅಡ್ಡಪರಿಣಾಮಗಳ ಕುರಿತು ವರದಿ ಮಾಡಿದ್ದರು. ಏಳು ಸಾವು ಸಂಭವಿಸಿತ್ತು. ಆದರೆ ಈ ಸಾವಿಗೂ ಲಸಿಕೆಗೂ ಸಂಬಂಧವಿಲ್ಲ ಎಂದೆನ್ನಲಾಗಿತ್ತು.
ಕ್ಲಿನಿಕ್ ಟ್ರಯಲ್ಸ್‌ನಲ್ಲಿ ಸಾಕಷ್ಟು ಲೋಪಗಳು ಕಂಡುಬಂದಿದ್ದವು ಎಂದು ವೈದ್ಯರೊಬ್ಬರು ಹೇಳಿದ್ದರು. ಟ್ರಯಲ್ಸ್‌ನಲ್ಲಿ ಪಾಲ್ಗೊಂಡವರ ಪಾಲಕರ ಬದಲಾಗಿ ಹಾಸ್ಟೆಲ್ ವಾರ್ಡನ್‌ಗಳು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದರು. ಈ ಪ್ರಯೋಗಕ್ಕೆ ಹೊರಗಿನ ಪ್ರಪಂಚದ ಸಂಪರ್ಕವಿಲ್ಲದ, ಲಸಿಕೆ ಕುರಿತು ಹೆಚ್ಚಿನ ಮಾಹಿತಿ ಇಲ್ಲದ ಆದಿವಾಸಿಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ದಿ ಸ್ಕಿನ್ ಡಾಕ್ಟರ್ ಆರೋಪಿಸಿದ್ದಾರೆ.
ಇದರ ವಿರುದ್ಧ ಪ್ರತಿಭಟನೆಗಳು ನಡೆದವು. ಯಾವುದೇ ತಪ್ಪು ನಡೆದಿಲ್ಲ ಎಂದು ಪಾಥ್ ಹೇಳಿತ್ತು. ಸಾವು ಸಂಭವಿಸಿದ್ದು ಸೋಂಕು ಹಾಗೂ ಆತ್ಮಹತ್ಯೆಯಿಂದಾಗಿ ಎಂದು ಹೇಳಿತ್ತು. ಇದೇ ಮಾದರಿಯ ಪ್ರಯೋಗವನ್ನು ಆಫ್ರಿಕಾದಲ್ಲೂ ನಡೆಸಲಾಗಿತ್ತು ಎಂದು ನೆಟ್ಟಿಗರು ಹಿಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.