ಕೀವ್: 'ಕಳೆದೊಂದು ತಿಂಗಳಿನಿಂದ ತೀವ್ರ ಹೋರಾಟ ನಡೆಸುತ್ತಿರುವ ರಷ್ಯಾ ಸೇನಾ ಪಡೆಯು ಪೂರ್ವ ಉಕ್ರೇನ್‌ನ ಪೋಕ್ರೋವ್‌ಸ್ಕ್ ನಗರದ ಹತ್ತಿರ ಸಮೀಪಿಸಿದೆ' ಎಂದು ಉಕ್ರೇನ್‌ನ ಸೇನಾ ಕಮಾಂಡರ್ ತಿಳಿಸಿದ್ದಾರೆ. ರಷ್ಯಾ ಪಡೆಗಳು ನಗರದಿಂದ ಕೆಲವೇ ಕಿಲೋ ಮೀಟರ್ ಅಂತರದಲ್ಲಿವೆ ಎಂದು ರಕ್ಷಣಾ ತಜ್ಞರು ತಿಳಿಸಿದ್ದಾರೆ.
'ನಗರ ಪ್ರವೇಶಿಸಲು ಯತ್ನಿಸಿದ ರಷ್ಯಾ ಪಡೆಗಳು ಕಳೆದ 24 ಗಂಟೆಗಳಲ್ಲಿ ನಡೆಸಿದ 40 ಪ್ರಯತ್ನಗಳನ್ನು ಉಕ್ರೇನ್ ಪಡೆಗಳು ಹಿಮ್ಮೆಟ್ಟಿಸಿವೆ' ಎಂದು ಸೇನೆಯ ಹಿರಿಯ ಅಧಿಕಾರಿಗಳು ಗುರುವಾರ ತಿಳಿಸಿದರು.
'ರಷ್ಯಾ ಪಡೆಗಳು ಮುನ್ನಡೆ ಸಾಧಿಸಲು ಎಲ್ಲ ಪ್ರಯತ್ನಗಳನ್ನು ನಡೆಸುತ್ತಿವೆ. ನಮ್ಮ ಪಡೆಗಳ ರಕ್ಷಣೆಯನ್ನು ಭೇದಿಸಲು ಯತ್ನಿಸುತ್ತಿದೆ' ಎಂದು ಉಕ್ರೇನ್‌ನ ಸೇನಾ ಪಡೆಯ ಮುಖ್ಯಸ್ಥ ಜನರಲ್ ಒಲೆಕ್ಸಾಂಡರ್ ಸಿರ್ಕ್‌ಸ್ಕ್‌ಯಿ ಅವರು ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.
ಪೋಕ್ರೋವ್‌ಸ್ಕ್ ನಗರ 60 ಸಾವಿರ ಜನಸಂಖ್ಯೆ ಹೊಂದಿದ್ದು, ಈ ನಗರದ ಹಿಡಿತ ಸಾಧಿಸಲು 2022ರ ಫೆಬ್ರುವರಿಯಿಂದಲೂ ರಷ್ಯಾ ಸೇನೆ ಹೋರಾಟ ನಡೆಸುತ್ತಿದೆ. ಉಕ್ರೇನ್ ಪಡೆಗಳಿಗೆ ಈ ನಗರವೇ ರಕ್ಷಣಾತ್ಮಕವಾಗಿ ಭದ್ರವಾದ ನೆಲೆಯಾಗಿದ್ದು, ಡೊನ್‌ಸ್ಟೆಕ್ ಪ್ರಾಂತ್ಯಕ್ಕೆ ಪ್ರಮುಖ ಸರಕು ನೆಲೆಯೂ ಆಗಿದೆ. ಈ ನಗರದ ಹಿಡಿತ ಸಾಧಿಸಿದರೆ, ಇಡೀ ಡೊನ್‌ಸ್ಟೆಕ್ ಹಿಡಿತ ಸಾಧಿಸಲು ನೆರವಾಗುತ್ತದೆ ಎಂದು ರಷ್ಯಾದ ಆಲೋಚನೆಯಾಗಿದೆ.
'ಪೋಕ್ರೋವ್‌ಸ್ಕ್ ನಗರದಿಂದ 6 ಕಿ.ಮೀ. ದೂರದಲ್ಲಿ ರಷ್ಯಾ ಸೇನಾ ಪಡೆಗಳು ಬೀಡುಬಿಟ್ಟಿವೆ' ಎಂದು 'ಯುದ್ಧ ಅಧ್ಯಯನ ಸಂಸ್ಥೆ'ಯು ತಿಳಿಸಿದೆ.