ಕಾಸರಗೋಡು: ಸಾರ್ವಜನಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸೃಜನಶೀಲ ಸಾಮಥ್ರ್ಯವನ್ನು ಗುರುತಿಸಿ ಪೋಷಿಸಲು ಎಸ್ ಎಸ್ ಕೆ ಕಾಸರಗೋಡಿನ ಅನುಮತಿಯೊಂದಿಗೆ ಹಿರಿಯ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಉರ್ದು ಅಕಾಡೆಮಿಕ್ ಕೌನ್ಸಿಲ್ ‘ಮೇರಿ ಆವಾಸ್ ಸುನೋ’ ಹೆಸರಿನಲ್ಲಿ ಆನ್‍ಲೈನ್ ಉರ್ದು ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಡಿಸೆಂಬರ್ 23 (ನಾಳೆ) ಸೋಮವಾರ ಶಾಲಾ ಹಂತ ಮತ್ತು ಉಪಜಿಲ್ಲಾ/ಶೈಕ್ಷಣಿಕ ಜಿಲ್ಲೆ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಯು ಡಿಸೆಂಬರ್ 25 ಮತ್ತು 27 ರಂದು ನಡೆಯಲಿದೆ.
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸ್ಪರ್ಧೆಯ ಪೋಸ್ಟರ್ ಅನ್ನು ಜಿಲ್ಲಾ ಉರ್ದು ಅಕಾಡೆಮಿಕ್ ಕಾಂಪ್ಲೆಕ್ಸ್ ಕಾರ್ಯದರ್ಶಿ ಅಮೀರ್ ಕೋಟಿಬೈಲ್ ಅವರಿಗೆ ಹಸ್ತಾಂತರಿಸಿ ಶನಿವಾರ ಬಿಡುಗಡೆಗೊಳಿಸಿದರು.
ಕಾಸರಗೋಡು ಮತ್ತು ಮಂಜೇಶ್ವರ ಉಪಜಿಲ್ಲಾ ಶೈಕ್ಷಣಿಕ ಸಂಯೋಜಕ ಸುರಯ್ಯ ಚಟ್ಟಂಚಾಲ್ ಮತ್ತು ಸುಲೈಖಾ ಉಪ್ಪಳ ಉಪಸ್ಥಿತರಿದ್ದರು.