ನವದೆಹಲಿ: ಪರಿಸರವಾದಿ ಮಾಧವ ಗಾಡ್ಗೀಳ್ ಅವರನ್ನು ವಿಶ್ವಸ್ಥೆಯು 'ಚಾಂಪಿಯನ್ಸ್ ಆಫ್ ದಿ ಅರ್ತ್' ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಗೆ ಆಯ್ಕೆಯಾಗಿರುವ ಆರು ಸಾಧಕರಲ್ಲಿ ಗಾಡ್ಗೀಳ್ ಅವರೂ ಒಬ್ಬರಾಗಿದ್ದಾರೆ.
ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ ಕುರಿತು ಮಾಧವ ಗಾಡ್ಗೀಳ್ ಅವರು ಮಾಡಿರುವ ಕಾರ್ಯಗಳನ್ನು ಪರಿಗಣಿಸಿ ವಿಶ್ವಸಂಸ್ಥೆಯು ತನ್ನ ಈ ಅತ್ಯುನ್ನತ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ.
ಜನಸಂಖ್ಯಾ ಒತ್ತಡ, ಹವಾಮಾನ ಬದಲಾವಣೆ ಹಾಗೂ ಅಭಿವೃದ್ಧಿ ಚಟುವಟಿಕೆಯಿಂದ ಪಶ್ಚಿಮ ಘಟ್ಟಗಳಲ್ಲಿ ಆಗುತ್ತಿರುವ ಬದಲಾವಣೆ ಕುರಿತು ಅಧ್ಯಯನ ಮಾಡಲು ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿ ಗಾಡ್ಗೀಳ್ ಕೆಲಸ ಮಾಡಿದ್ದರು. 2011ರಲ್ಲಿ ಈ ಸಮಿತಿಯು ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಬೇಕು ಎಂದು ವರದಿ ಸಲ್ಲಿಸಿತ್ತು.
ಪ್ರಶಸ್ತಿಗೆ ಪರಿಗಣಿಸಿದವರ ಪಟ್ಟಿಯಲ್ಲಿ ಇದ್ದ ಭಾರತದ ಏಕೈಕ ವ್ಯಕ್ತಿ ಗಾಡ್ಗೀಳ್ ಅವರಾಗಿದ್ದರು.
'ಪಶ್ಚಿಮ ಘಟ್ಟದಲ್ಲಿನ ವಸ್ತುಸ್ಥಿತಿಯ ಕುರಿತು ಸಮಿತಿಯು ಪ್ರಾಮಾಣಿಕ ವರದಿಯನ್ನು ನೀಡಿತ್ತು. ಈ ರೀತಿ ವರದಿ ಸಲ್ಲಿಸುವವರೇ ಈಗ ಕಡಿಮೆಯಾಗಿದ್ದಾರೆ. ಈ ವರದಿಯನ್ನು ಆಧರಿಸಿ ಜನರೇ ವಿವೇಚನೆ ಮಾಡಿ, ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು. ನಾನು ವರದಿ ಬರೆಯುತ್ತಿರುವಾಗಲೂ, ಅಷ್ಟು ನೇರಾನೇರ ಬರೆಯಬೇಡಿ ಎಂದು ತಡೆಯಲು ಯತ್ನಿಸಿದವರೂ ಇದ್ದರು' ಎಂದು 82 ವರ್ಷ ವಯಸ್ಸಿನ ಗಾಡ್ಗೀಳ್ ಪ್ರತಿಕ್ರಿಯಿಸಿದರು.
'ಪಶ್ಚಿಮ ಘಟ್ಟ ಕುರಿತು ಸಮಿತಿಯು ಸಲ್ಲಿಸಿದ್ದ ವರದಿಯನ್ನು ಭಾರತದ ಎಲ್ಲ ಭಾಷೆಗಳಿಗೂ ಅನುವಾದ ಮಾಡಿಸಿ, ಜನರಿಗೆ ತಲುಪಿಸುವಂತೆ ಮನವಿ ಮಾಡಿದ್ದೆ. ಆದರೆ, ಅದು ನೆರವೇರಲಿಲ್ಲ. ಈಗ ಸಾಮಾಜಿಕ ಮಾಧ್ಯಮದಿಂದಾಗಿ ಜನರಿಗೆ ಯಾವುದು ಸರಿ, ಯಾವುದು ತಪ್ಪು ಎಂದು ವಿವೇಚಿಸಲು ಪೂರಕವಾದ ಮಾಹಿತಿ ಲಭ್ಯವಾಗುತ್ತಿದೆ. ಇದು ಸಂತೋಷದ ವಿಷಯ' ಎಂದರು.
2012ರ ಜುಲೈನಲ್ಲಿ ಪಶ್ಚಿಮ ಘಟ್ಟಗಳನ್ನು ಸಂರಕ್ಷಿತ ಪ್ರದೇಶ ಎಂದು ಯುನೆಸ್ಕೊ ಘೋಷಿಸಿತು. 2013ರಲ್ಲಿ ರಾಕೆಟ್ ವಿಜ್ಞಾನಿ ಕಸ್ತೂರಿರಂಗನ್ ಅಧ್ಯಕ್ಷತೆಯಲ್ಲಿ ಅಲ್ಲಿನ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸುವಂತೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ವಹಿಸಬೇಕಾದ ಕ್ರಮಗಳನ್ನು ಕುರಿತ ಐದು ಕರಡು ಅಧಿಸೂಚನೆಗಳನ್ನು 2014ರಿಂದ 2024ರವರೆಗೆ ಕೇಂದ್ರ ಸರ್ಕಾರವು ಹೊರಡಿಸಿದೆ. ಇದಕ್ಕೆ ರಾಜ್ಯಗಳಿಂದ ತಕರಾರು ಸಲ್ಲಿಕೆಯಾಗಬೇಕಿದ್ದು, ಆನಂತರವಷ್ಟೆ ಅಂತಿಮ ಅಧಿಸೂಚನೆ ಹೊರಡಿಸುವುದು ಸಾಧ್ಯವಾಗಲಿದೆ.