ನವದೆಹಲಿ: ಅಮೆರಿಕದ ಉದ್ಯಮಿ ಜಾರ್ಜ್ ಸೋರೊಸ್ ಜತೆ ಕಾಂಗ್ರೆಸ್ ನಂಟು ಹೊಂದಿದೆ ಎಂಬ ಆರೋಪ ಮತ್ತು ಅದಾನಿ ಭ್ರಷ್ಟಾಚಾರ ಪ್ರಕರಣದ ಬಗ್ಗೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಸೋಮವಾರ ತೀವ್ರ ಪ್ರತಿಭಟನೆ ನಡೆಸಿದವು. ಇದರಿಂದಾಗಿ ಸದನದಲ್ಲಿ ಯಾವುದೇ ವಿಷಯದ ಬಗ್ಗೆ ಫಲಪ್ರದವಾದ ಚರ್ಚೆಯಾಗದೆ ಕಲಾಪವನ್ನು ಮುಂದೂಡಲಾಯಿತು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ಆರೋಪ ಮಾಡಿದ ಬಿಜೆಪಿ ಸದಸ್ಯನ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡನೆ ಮಾಡಬೇಕು ಎಂದು ಆಗ್ರಹಿಸಿ ವಿಪಕ್ಷಗಳ ನಾಯಕರು ನೋಟಿಸ್ ಸಲ್ಲಿಸಿದರು. ಇದರಿಂದಾಗಿ ಆಡಳಿತ-ವಿಪಕ್ಷಗಳ ಮಧ್ಯೆ ವಾಗ್ವಾದ ನಡೆಯಿತು. ವಿಪಕ್ಷಗಳ ಸದಸ್ಯರು ಸಭಾಧ್ಯಕ್ಷರ ಪೀಠದತ್ತ ತೆರಳಿ ಪ್ರತಿಭಟಿಸಿದರು. ಹೀಗಾಗಿ ಸ್ಪೀಕರ್ ಓಂ ಬಿರ್ಲಾ ಅವರು ಹಲವು ಬಾರಿ ಕಲಾಪವನ್ನು ಮುಂದೂಡಿದರು.
'ಪ್ರಶ್ನೋತ್ತರ ಅವಧಿಯು ಮುಖ್ಯವಾದುದು. ಕಲಾಪ ಸರಿಯಾಗಿ ನಡೆಯಲು ಬಿಡಿ. ದೇಶವು ಸದನದಲ್ಲಿ ಚರ್ಚೆಯನ್ನು ಬಯಸುತ್ತದೆ. ನೀವು ಕಲಾಪಕ್ಕೆ ಅಡ್ಡಿ ಮಾಡುತ್ತಿದ್ದೀರಿ' ಎಂದು ಸ್ಪೀಕರ್ ಹೇಳಿದರು.
ಆದರೆ, ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದ ಸದಸ್ಯರು ಮತ್ತೆ ಸಭಾಧ್ಯಕ್ಷರ ಪೀಠದ ಸಮೀಪ ತೆರಳಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಸಮಾಜವಾದಿ ಪಕ್ಷದ ಸದಸ್ಯರು ಅವರೊಂದಿಗೆ ಜತೆಗೂಡಿದರು.
'ಮೋದಿ ಸರ್ಕಾರ ಡೌನ್ ಡೌನ್', 'ಮೋದಿ ಸರ್ಕಾರಕ್ಕೆ ಶೇಮ್ ಶೇಮ್', 'ನ್ಯಾಯ ಬೇಕು' ಎಂದು ಘೋಷಣೆ ಕೂಗಿದರು. ಪ್ರತಿಭಟನೆ ಮುಂದುವರಿದ ಕಾರಣ ದಿನದ ಕಲಾಪವನ್ನು ಅಂತ್ಯಗೊಳಿಸಲಾಯಿತು.
ಆರ್‌ಜೆಡಿ ಸದಸ್ಯರು ಆಸನದಲ್ಲಿ ಎದ್ದು ನಿಂತು ಪ್ರತಿಭಟನೆಗೆ ಬೆಂಬಲ ನೀಡಿದರು. ಸೌಗತಾ ರಾಯ್, ಕಲ್ಯಾಣ್ ಬ್ಯಾನರ್ಜಿ, ಮಹುವಾ ಮೊಯಿತ್ರಾ ಸೇರಿದಂತೆ ಟಿಎಂಸಿ ಸದಸ್ಯರು ತಮ್ಮ ಆಸನದಲ್ಲಿಯೇ ಕುಳಿತಿದ್ದರು.
ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಅವರು ಸದನದಲ್ಲಿ ಉಪಸ್ಥಿತರಿದ್ದರು.